ಸಾಹಿತ್ಯ ಲೋಕ

ಆಹಾ! ಬ್ರಹ್ಮನೆಂಬ ಜಾದೂಗಾರ

ಹಾಸಿ ಚಪ್ಪರ ಬೀಸಿ ಚಾಮರ
ಹೊಳೆವ ದೇವರ ಮಂದಿರ |
ಸೂಸಿ ಹಾಸವ ಕೂಸಿಗಾಸರೆ
ಕೊಡುವ ಸುಂದರ ಪರಿಸರ || ಪ ||

ಜಾದು ಕಾರನೆ ಇಳೆಗೆ ಇಳಿಯುತ
ಸೃಷ್ಟಿ ಮಾಡಿದ ಸ್ವರ್ಗವೇ |
ವಾದ್ಯ ವೃಂದದ ಮಧುರ ನಾದಕೆ
ಸಲಿಲ ಧಾರೆಯ ನೃತ್ಯವೇ ||

ಹಿಮದ ಉಡುಗೆಯ ಧರಿಸಿ ಮೆರೆಯುವ
ನಡುಕವಿಲ್ಲದ ಗಿರಿಗಳೇ |
ಸುಮಕೆ ತೊಟ್ಟಿಲು ಕಟ್ಟಿ ತೂಗುವ
ತರುವು ಲತೆಗಳ ಬನಗಳೇ ||

ಬಣ್ಣದುಡುಗೆಯ ಹೊಲಿದು ಕೊಟ್ಟಿಹ
ದರ್ಜಿ ಯಾರೊ ಚಿಟ್ಟೆಗೆ |
ಹಣ್ಣು ಸವಿಯುತಲೆಂಥ ಗಾಯನ
ಗುರುಗಳಾರೊ ಪಕ್ಷಿಗೆ ||

ಎತ್ತ ಹೋಗದೆ ನಿಂದು ನಗುತಿಹ
ನಮ್ಮ ನಡುವೆಯೆ ಬ್ರಹ್ಮನು |
ಇತ್ತ ಕಾಣಿಕೆ ಉಳಿಸಿಕೊಂಡರೆ
ನೆಮ್ಮದಿಯಲೇ ಮನುಜನು ||


            ಶೋಭಾ ಹರಿಪ್ರಸಾದ ಶೆಟ್ಟಿಗಾರ್ ಉಡುಪಿ

ಕಾಮೆಂಟ್ ಬಿಡಿ

Join Us