ಮುಲ್ಕಿ: ವನಭೋಜನದ ಸಂಪರ್ಕ ರಸ್ತೆ ಅವ್ಯವಸ್ಥೆ – ಜನರ ಆಕ್ರೋಶ
ಮುಲ್ಕಿ: ವನಭೋಜನವು ಧಾರ್ಮಿಕ ಹಾಗೂ ಸಾಂಪ್ರದಾಯಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ಪ್ರತಿ ವರ್ಷ ಶ್ರೀ ವೆಂಕಟರಮಣ ದೇವರು ಇಲ್ಲಿ ಆಗಮಿಸಿ ವನಭೋಜನದ ಪೂಜೆ ಸ್ವೀಕರಿಸುವ ಸಂಪ್ರದಾಯವಿದೆ. ಆದರೆ ಇಂತಹ ಮಹತ್ವದ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಪ್ರದೇಶವು ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ವಾರ್ಡ್‌ಗೆ ಸೇರಿದ್ದು, ಚುನಾವಣೆಯ ನಂತರ ತಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎನ್ನುವುದು ಅವರ ಅಳಲು.
ಮುಲ್ಕಿ–ಮೂಡುಬಿದಿರೆ ರಾಜ್ಯ ಹೆದ್ದಾರಿಯಿಂದ ವನಭೋಜನ ದತ್ತ ಸಾಗುವ ಈ ರಸ್ತೆ, ರೈಲ್ವೆ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಮಳೆಗಾಲದಲ್ಲಿ ರಸ್ತೆಯ ಎರಡೂ ಬದಿಯ ಮಣ್ಣು ಕೊಚ್ಚಿಹೋಗಿ ದೊಡ್ಡ ಹೊಂಡಗಳು ನಿರ್ಮಾಣವಾಗುತ್ತಿವೆ. ಕಡಿದಾದ ತಿರುವು ಮತ್ತು ಇಳಿಜಾರಿನ ಕಾರಣದಿಂದ ಈ ಮಾರ್ಗ ಅಪಘಾತ ವಲಯವಾಗಿ ಪರಿಣಮಿಸಿದ್ದು, ದ್ವಿಚಕ್ರ ವಾಹನ ಸವಾರರು ಪ್ರತಿದಿನ ಜೀವಭಯದಲ್ಲಿ ಸಂಚರಿಸುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಮಳೆನೀರನ್ನು ಸಮರ್ಪಕವಾಗಿ ಚರಂಡಿಗೆ ಹರಿಸುವ ವ್ಯವಸ್ಥೆ ಮಾಡಿದ್ದರೆ ರಸ್ತೆಯ ಹಾನಿಯನ್ನು ಬಹುತೇಕ ತಡೆಯಬಹುದಿತ್ತು. ಆದರೆ ಈವರೆಗೆ ಯಾವುದೇ ಶಾಶ್ವತ ಕಾಮಗಾರಿ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ನಗರ ಪಂಚಾಯತ್ ಆಡಳಿತವು ರಾಜಕೀಯ ಭೇದವಿಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಿ, ವನಭೋಜನ ಕ್ಷೇತ್ರದ ಸಂಪರ್ಕ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಸಾರ್ವಜನಿಕರ ವಿಶ್ವಾಸ ಗಳಿಸಲು ಮಾತಿಗಿಂತ ಕಾರ್ಯ ಮುಖ್ಯ ಎಂಬುದನ್ನು ಜನಪ್ರತಿನಿಧಿಗಳು ಸಾಬೀತುಪಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ಬಂದಾಗ ನಾಯಕರಿಗೆ ಸಮುದಾಯದ ಮೇಲೆ ಪ್ರೀತಿ!?
ಅಷ್ಟೇ ಯಾಕೆ, ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದಲ್ಲಿದ್ದು, ತನ್ನದೇ ಶೆಟ್ಟಿಗಾರ್ ಸಮುದಾಯದ ನಾಯಕ ಎಂದು ಹೇಳಿಕೊಳ್ಳುವ ಕೆಲವರು ತಮ್ಮ ಸಮುದಾಯದ ಜನರ ಸಮಸ್ಯೆಗಳನ್ನು ಒಮ್ಮೆಯಾದರೂ ಆಲಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಚುನಾವಣೆ ಬಂದಾಗ ಮಾತ್ರ ಸುಳ್ಳು ಭರವಸೆಗಳನ್ನು ನೀಡುವುದಕ್ಕಿಂತ, ತಮ್ಮ ಪಕ್ಷ ಅಧಿಕಾರದಲ್ಲಿರುವಾಗಲೇ ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ಜವಾಬ್ದಾರಿ ಅವರದ್ದು. ಆದರೆ ಜನರ ಅಭಿವೃದ್ಧಿಗಿಂತ ಸ್ವಂತ ಅಭಿವೃದ್ಧಿಯಲ್ಲೇ ತೊಡಗಿರುವುದು ವಿಷಾದನೀಯ.
ನಿಜವಾದ ಸಮಾಜಸೇವೆ ಎಂದರೆ ಚುನಾವಣೆ ಸಮಯದಲ್ಲಿ ಮಾತ್ರ ಜನರನ್ನು ನೆನಪಿಸಿಕೊಳ್ಳುವುದಲ್ಲ; ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುವುದಾಗಿದೆ. ಚುನಾವಣೆ ಬಂದಾಗ ಶೆಟ್ಟಿಗಾರ್ ಸಮುದಾಯದ ಮೇಲೆ ಪ್ರೀತಿ ತೋರಿಸುವ ಬದಲು, ವರ್ಷಪೂರ್ತಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು.
ಜಾತಿ ರಾಜಕೀಯ ಮಾಡುವುದಕ್ಕಿಂತ, ತಮ್ಮ ಸಮುದಾಯದ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ದೇವರು ಮೆಚ್ಚುವ ಕೆಲಸ ಮಾಡಿ, ಜನರ ಪ್ರೀತಿ ಗಳಿಸಿ ನಿಜವಾದ ಜನನಾಯಕನಾಗಿ ಹೊರಹೊಮ್ಮಲಿ.
ಕಾಮೆಂಟ್ ಬಿಡಿ