ತಮಗೆ ‘ಕಾಲ ಕಸ’ವಾಗಿದ್ದ ಕಾಂಗ್ರೆಸ್‌ನತ್ತಲೇ ಮರಳಿದ ಮಮತಾ ಬ್ಯಾನರ್ಜಿ
‘ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಮಯ ಹಾಗೂ ಸಂದರ್ಭಗಳಿಗಿಂತ ದೊಡ್ಡ ಗುರು ಬೇರೊಬ್ಬರಿಲ್ಲ’ – ಇದು ರಾಜಕಾರಣದಲ್ಲಿ ಸದಾ ಜೀವಂತವಾಗಿರುವ ಸಾಲು. ಪ್ರಸ್ತುತ ಸನ್ನಿವೇಶದಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಈ ಮಾತುಗಳಿಗೆ ಅತ್ಯುತ್ತಮ ಉದಾಹರಣೆಯಾಗಿ ನಿಂತಿದ್ದಾರೆ. ಒಂದು ಕಾಲದಲ್ಲಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವನ್ನು ಕಸದ ಬುಟ್ಟಿಗೆ ಎಸೆಯುವಂತೆ ಜರಿದಿದ್ದ, ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿಯವರ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಮಮತಾ ಬ್ಯಾನರ್ಜಿ, ಇಂದು ದಿಲ್ಲಿಯ ಅದೇ ಮೈತ್ರಿಕೂಟದ ಸಭೆಯಲ್ಲಿ ಅತ್ಯಂತ ಶಿಸ್ತಿನಿಂದ, ಮೌನವಾಗಿ ಭಾಗವಹಿಸಿದ್ದಾರೆ. ಬಂಗಾಳದಲ್ಲಿ ಅನುಭವಿಸಿದ ಭಾರಿ ರಾಜಕೀಯ ಹಿನ್ನಡೆ ಮತ್ತು ಸ್ವಂತ ಪಕ್ಷದಲ್ಲೇ ಭುಗಿಲೆದ್ದಿರುವ ಶಾಸಕರ ಬಂಡಾಯದ ತೀವ್ರತೆ ಮಮತಾ ಅವರ ರಾಜಕೀಯ ಅಹಂಅನ್ನು ಥಣಿಸಿದೆ.
ಕೆಲವೇ ತಿಂಗಳುಗಳ ಹಿಂದೆ, ಮಮತಾ ಬ್ಯಾನರ್ಜಿ ಅವರಿಗೆ ‘ಇಂಡಿಯಾ’ ಮೈತ್ರಿಕೂಟ ಎನ್ನುವುದು ಕೇವಲ ಒಂದು ಅಪಹಾಸ್ಯದ ವಸ್ತುವಾಗಿತ್ತು. ಬಂಗಾಳದಲ್ಲಿ ತಮಗೆ ಯಾವುದೇ ಪ್ರಬಲ ವಿರೋಧ ಪಕ್ಷವಿಲ್ಲ. ತಾವೇ ದಿಲ್ಲಿಯ ಗದ್ದುಗೆಯನ್ನು ನಿಯಂತ್ರಿಸಬಲ್ಲ ಏಕೈಕ ಶಕ್ತಿ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿ ಮನೆಮಾಡಿತ್ತು.
ಲೋಕಸಭಾ ಚುನಾವಣೆ ವೇಳೆ, ಸೀಟು ಹಂಚಿಕೆಯ ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್‌ಅನ್ನು ಅತ್ಯಂತ ಹೀನಾಯವಾಗಿ ಮಮತಾ ನಿಂದಿಸಿದ್ದರು. “ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ. ಇಡೀ ದೇಶದಲ್ಲಿ 40 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಪಕ್ಷದೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಬೇಕೇ?” ಎಂದು ಬಹಿರಂಗವಾಗಿಯೇ ಲೇವಡಿ ಮಾಡಿದ್ದರು. ಮಾತ್ರವಲ್ಲದೆ, ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದಾಗ, ಕನಿಷ್ಠ ಸೌಜನ್ಯಕ್ಕೂ ಅವರನ್ನು ಸ್ವಾಗತಿಸದ ಮಮತಾ, “ರಾಹುಲ್ ಗಾಂಧಿ ಯಾರು? ಅವರು ಬಂಗಾಳಕ್ಕೆ ಬಂದು ಏನು ಮಾಡಲು ಸಾಧ್ಯ” ಎಂದು ಕೇಳಿದ್ದರು.
ಕೇವಲ ಫೋಟೋ ಶೂಟ್ ಮಾಡುವುದರಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದ ಮಮತಾ, ಬಂಗಾಳದ ಎಲ್ಲ 42 ಲೋಕಸಭಾ ಸ್ಥಾನಗಳಿಗೆ ಏಕಾಂಗಿಯಾಗಿ ಅಭ್ಯರ್ಥಿಗಳನ್ನು ಘೋಷಿಸಿದ್ದರು. ಅ ಮೂಲಕ ‘ಇಂಡಿಯಾ’ ಮೈತ್ರಿಕೂಟದ ಪ್ರಾದೇಶಿಕ ಅಸ್ತಿತ್ವಕ್ಕೆ ಬಂಗಾಳದಲ್ಲೇ ಮೊದಲ ಕೊಡಲಿ ಪೆಟ್ಟು ನೀಡಿದ್ದರು. ದಿಲ್ಲಿಯಲ್ಲಿ ಏನಾದರೂ ಆಗಲಿ, ಬಂಗಾಳದಲ್ಲಿ ನಾನೇ ಸುಪ್ರೀಂ ಎಂಬುದು ಅವರ ಅಂದಿನ ಗರ್ವದ ನುಡಿಯೂ ಆಗಿತ್ತು.
ಆದರೆ, ಪ್ರಜಾಪ್ರಭುತ್ವದಲ್ಲಿ ಮತದಾರರು ಯಾರ ಅಹಂಅನ್ನೂ ದೀರ್ಘಕಾಲ ಸಹಿಸುವುದಿಲ್ಲ ಎಂಬ ಮಾತಿದೆ. ಬಂಗಾಳದಲ್ಲಿ ಮಮತಾ ಸರ್ಕಾರದ ವಿರುದ್ಧ ಮತದಾರರು ಸಿಟ್ಟಾಗಿದ್ದರು. ಇದೇ ಸಮದಯಲ್ಲಿ ಬಿಜೆಪಿ, ಬಂಗಾಳದಲ್ಲಿ ನಾನಾ ಹೊಸ ನಿಯಮಗಳೊಂದಿಗೆ ಎಸ್‌ಐಆರ್‌ಅನ್ನು ಹೇರಿ, ಮಮತಾರಿಗೆ ಓಟು ಹಾಕುವ ಮತದಾರರನ್ನೇ ಮತಪಟ್ಟಿಯಿಂದ ಹೊರಹಾಕಿತು. ತಂತ್ರ-ಕುತಂತ್ರದೊಂದಿಗೆ ಮಮತಾರನ್ನು ಹೀನಾಯವಾಗಿ ಸೋಲಿಸಿ, ಅಧಿಕಾರವನ್ನು ಕಸಿದುಕೊಂಡಿತು.
ಈ ಸೋಲಿನ ಬೆನ್ನಲ್ಲೇ ಟಿಎಂಸಿಯೊಳಗೆ ಭಾರೀ ಆಂತರಿಕ ಕಚ್ಚಾಟ ಮತ್ತು ಬಂಡಾಯ ಭುಗಿಲೆದ್ದಿದೆ. ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಕೆಂಡಕಾರುತ್ತಿರುವ ಟಿಎಂಸಿ ಶಾಸಕ-ಸಂಸದರ ಬೃಹತ್ ಗುಂಪು ಪಕ್ಷದ ವಿರುದ್ಧ ಬಂಡಾಯ ಎದ್ದಿದೆ. ನಿರಂತರ ರಹಸ್ಯ ಸಭೆಗಳನ್ನು ನಡೆಸುತ್ತಿದೆ. ಅವರಲ್ಲಿ ಬಹುಸಂಖ್ಯಾತರು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವ ಸಾಧ್ಯತೆಗಳೂ ಇವೆ. ತಮ್ಮ ಪಕ್ಷ ಇಭ್ಭಾಗವಾಗುವ ಭೀತಿ ಮಮತಾ ಅವರನ್ನು ಆವರಿಸಿದೆ. ಈ ಆಂತರಿಕ ದಂಗೆಯನ್ನು ಹತ್ತಿಕ್ಕಲು, ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಈಗ ಅವರಿಗೆ ಹೊರಗಿನ ರಾಜಕೀಯ ಶಕ್ತಿಯ ಬೆಂಬಲ ಅನಿವಾರ್ಯವಾಗಿದೆ.
ಆದ್ದರಿಂದ, ಯಾವ ಮೈತ್ರಿಕೂಟವನ್ನು ಮಮತಾ ಬ್ಯಾನರ್ಜಿ ಅವರು ‘ಕಾಲ ಕಸ’ದಂತೆ ಕಂಡಿದ್ದರೋ, ಇಂದು ಅದೇ ಮೈತ್ರಿಕೂಟದ ಆಸರೆ ಬಯಸಿ ಅವರು ಖುದ್ದಾಗಿ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ನಡೆದಯುತ್ತಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಯಾವುದೇ ಅಹಂ ಇಲ್ಲದೆ, ಶಿಸ್ತಿನ ಸಿಪಾಯಿಯಂತೆ ಭಾಗವಹಿಸಿದ್ದಾರೆ. ಬಂಗಾಳದಲ್ಲಿ ತಮ್ಮ ಸ್ವಂತ ನಾಯಕತ್ವವೇ ಅಪಾಯದಲ್ಲಿರುವಾಗ, ಕೇಂದ್ರದಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತು ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಒಳಗೊಂಡ ಒಕ್ಕೂಟದ ಬೆಂಬಲ ತಮಗೆ ಬೇಕೇ ಬೇಕು ಎಂಬ ಕಟು ಸತ್ಯ ಮಮತಾಗೆ ಈಗ ಮನವರಿಕೆಯಾಗಿದೆ.
ಕಾಮೆಂಟ್ ಬಿಡಿ