ಸಿನಿಮಾ

ಚೆನ್ನೈನಲ್ಲಿರುವ ತ್ರಿಶಾ ಕೃಷ್ಣನ್ ಮನೆಗೆ ಬಾಂಬ್ ಬೆದರಿಕೆ

ಚೆನ್ನೈ: ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರ ಚೆನ್ನೈನ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ, ಪೊಲೀಸ್ ತನಿಖೆಯ ನಂತರ ಇದೊಂದು ಹುಸಿ ಕರೆ (Hoax Call) ಎಂದು ದೃಢಪಟ್ಟಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳವಾರ ಬೆಳಿಗ್ಗೆ ಚೆನ್ನೈನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು, ಅಲ್ವಾರ್‌ಪೇಟೆಯಲ್ಲಿರುವ ತ್ರಿಷಾ ಅವರ ನಿವಾಸದಲ್ಲಿ ಬಾಂಬ್ ಇರಿಸಲಾಗಿದೆ ಮತ್ತು ಅದು ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ತೇನಂಪೇಟೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ (BDDS) ಮತ್ತು ಶ್ವಾನ ದಳದೊಂದಿಗೆ ನಟಿಯ ಮನೆಗೆ ಧಾವಿಸಿದರು.

ಸುಮಾರು ಎರಡು ಗಂಟೆಗಳ ಕಾಲ ಮನೆಯ ಪ್ರತಿಯೊಂದು ಮೂಲೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಭದ್ರತಾ ಸಿಬ್ಬಂದಿ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಸುಳ್ಳು ಕರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಬೆದರಿಕೆ ಬಂದ ಸಮಯದಲ್ಲಿ ನಟಿ ತ್ರಿಷಾ ಅವರು ತಮ್ಮ ಮುಂಬರುವ ಚಿತ್ರದ ಶೂಟಿಂಗ್‌ಗಾಗಿ ಮನೆಯಿಂದ ಹೊರಗಿದ್ದರು ಎಂದು ತಿಳಿದುಬಂದಿದೆ. ಮನೆಯಲ್ಲಿದ್ದ ಅವರ ಕುಟುಂಬ ಸದಸ್ಯರು ಆರಂಭದಲ್ಲಿ ಆತಂಕಕ್ಕೊಳಗಾದರೂ, ಪೊಲೀಸರ ಸಮಯೋಚಿತ ಕ್ರಮದಿಂದ ಪರಿಸ್ಥಿತಿ ತಿಳಿಯಾಯಿತು.

ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೋನ್ ಸಿಗ್ನಲ್‌ಗಳ ಆಧಾರದ ಮೇಲೆ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿನಾಕಾರಣ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಕಾಮೆಂಟ್ ಬಿಡಿ

Join Us