ರನ್‌ವೇಯಲ್ಲಿ ಭೀಕರ ವಿಮಾನ ಅಪಘಾತ ನೂರಕ್ಕೂ ಹೆಚ್ಚು ಪ್ರಯಾಣಿಕರು ಗಾಯ
ನ್ಯೂಯಾರ್ಕ್ : ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಭೀಕರ ವಿಮಾನ ಅಪಘಾತ ಸಂಭವಿಸಿದೆ. ರನ್‌ವೇಯಲ್ಲಿ ಆಗಮಿಸುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ನಿಯಂತ್ರಣ ತಪ್ಪಿ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ನೂರಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಫ್ಲೈಟ್‌ರಾಡರ್ 24 ವರದಿಯ ಪ್ರಕಾರ, ಏರ್ ಕೆನಡಾ ಎಕ್ಸ್‌ಪ್ರೆಸ್ ಸಿಆರ್‌ಜೆ-900 (CRJ-900) ವಿಮಾನವು ರನ್‌ವೇ 4ರಲ್ಲಿ ಇಳಿಯುತ್ತಿದ್ದಾಗ ಟ್ಯಾಕ್ಸಿವೇಯಲ್ಲಿದ್ದ ಅಗ್ನಿಶಾಮಕ ಎಂಜಿನ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಿಮಾನದ ಮುಂಭಾಗ ಜಖಂಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ತಕ್ಷಣವೇ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಘಟನೆಯಲ್ಲಿ ಸುಮಾರು 70 ರಿಂದ 100 ಜನರು ಗಾಯಗೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಸ್ಥಳಾಂತರಿಸುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಪ್ರಯಾಣಿಕರನ್ನು ತುರ್ತಾಗಿ ಹೊರತರುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಘಟನೆಯ ನಿಖರ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಾಮೆಂಟ್ ಬಿಡಿ