ವಾಣಿಜ್ಯ

Nuama Mutual Fund-ಶೀಘ್ರದಲ್ಲೇ ಬರಲಿದೆ‌ ನುವಾಮಾ ಮ್ಯೂಚುವಲ್ ಫಂಡ್, ಸೆಬಿಯಿಂದ ಸಿಕ್ತು ಗ್ರೀನ್ ಸಿಗ್ನಲ್

ಬೆಂಗಳೂರು: ಭಾರತದ ಪ್ರತಿಷ್ಠಿತ ಸಂಪತ್ತು ನಿರ್ವಹಣಾ ಸಂಸ್ಥೆ 'ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಲಿಮಿಟೆಡ್' ಹೂಡಿಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಮ್ಯೂಚುವಲ್ ಫಂಡ್ ಕಾರ್ಯಾಚರಣೆಗಳನ್ನು ಅಧಿಕೃತವಾಗಿ ಆರಂಭಿಸಲು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯಿಂದ ತನಗೆ ಅಂತಿಮ ಹಂತದ ಅನುಮೋದನೆ ದೊರೆತಿದೆ ಎಂದು ಕಂಪನಿ ಬುಧವಾರ ಪ್ರಕಟಿಸಿದೆ.

ಕಂಪನಿಯ ಅಂಗಸಂಸ್ಥೆಯಾದ 'ನುವಾಮಾ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್' ಇನ್ಮುಂದೆ ಈ ಮ್ಯೂಚುವಲ್ ಫಂಡ್ ವ್ಯವಹಾರದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ.

ಸೆಬಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನೆಲೆಯಲ್ಲಿ, ನುವಾಮಾ ಈಗ 'ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್' (ಎಸ್‌ಐಎಫ್‌ - ವಿಶೇಷ ಹೂಡಿಕೆ ನಿಧಿ) ಚೌಕಟ್ಟಿನ ಅಡಿಯಲ್ಲಿ ಹೊಸ ಹೂಡಿಕೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಅಗತ್ಯ ಅನುಮತಿಗಳನ್ನು ಪಡೆಯಲಿದೆ. 

ಇದಾದ ಬಳಿಕ, ಕಾಲಕ್ರಮೇಣ ಸಾಮಾನ್ಯ ಹೂಡಿಕೆದಾರರಿಗಾಗಿ ವಿವಿಧ ಬಗೆಯ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಬಿಡುಗಡೆ ಮಾಡಲು ಕಂಪನಿ ಯೋಜನೆ ರೂಪಿಸಿದೆ.

ಈ ಹೊಸ ಬೆಳವಣಿಗೆಯ ಕುರಿತು ವಿವರಗಳನ್ನು ಹಂಚಿಕೊಂಡಿರುವ ನುವಾಮಾ ಗ್ರೂಪ್‌ನ ಎಂಡಿ ಮತ್ತು ಸಿಇಒ ಆಶಿಶ್ ಕೆಹೈರ್, "ಮ್ಯೂಚುವಲ್ ಫಂಡ್ ವ್ಯವಹಾರವನ್ನು ಸ್ಥಾಪಿಸಲು ಸೆಬಿಯ ಅನುಮೋದನೆ ಸಿಕ್ಕಿರುವುದು ನಮ್ಮ ಕಂಪನಿಯ ಬೆಳವಣಿಗೆಯ ಹಾದಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ನಮ್ಮಲ್ಲಿರುವ ಹೂಡಿಕೆಯ ಪರಿಣತಿ ಮತ್ತು ಬೃಹತ್ ಗ್ರಾಹಕ ಜಾಲವು ಈ ಹೊಸ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಾಯ ಮಾಡಲಿದೆ. ಆರಂಭದಲ್ಲಿ ನಾವು 'ಎಸ್‌ಐಎಫ್‌' ಯೋಜನೆಗಳ ಮೇಲೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಕೈಗೆಟುಕುವಂತಹ ಮ್ಯೂಚುವಲ್ ಫಂಡ್ ಪರಿಹಾರಗಳನ್ನು ಒದಗಿಸಲಿದ್ದೇವೆ," ಎಂದರು.

ಭಾರತದಲ್ಲಿ ಈಗ ಮ್ಯೂಚುವಲ್ ಫಂಡ್ ಯುಗ!

ನುವಾಮಾ ಕಂಪನಿಯು ಸರಿಯಾದ ಸಮಯದಲ್ಲೇ ಮ್ಯೂಚುವಲ್ ಫಂಡ್ ವಲಯಕ್ಕೆ ಕಾಲಿಡುತ್ತಿದೆ. ಏಕೆಂದರೆ, ಭಾರತದಲ್ಲಿ ಪ್ರಸ್ತುತ ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣೆಯಲ್ಲಿರುವ ಆಸ್ತಿಯು ಬರೋಬ್ಬರಿ 80 ಲಕ್ಷ ಕೋಟಿ ರೂ. ಗಡಿಯನ್ನು ದಾಟಿ ಐತಿಹಾಸಿಕ ಸಾಧನೆ ಮಾಡಿದೆ. 

ಜನರಲ್ಲಿ ಹಣಕಾಸಿನ ಬಗ್ಗೆ ಅರಿವು ಹೆಚ್ಚಾಗುತ್ತಿರುವುದು ಮತ್ತು 'ಎಸ್‌ಐಪಿ' ಮೂಲಕ ಪ್ರತಿ ತಿಂಗಳು ಹೂಡಿಕೆ ಮಾಡುವವರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ, ಮುಂಬರುವ ದಶಕದಲ್ಲೂ ಈ ಉದ್ಯಮ ಭಾರಿ ಪ್ರಗತಿ ಕಾಣುವ ನಿರೀಕ್ಷೆಯಿದೆ.

ಕಳೆದ 30 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿ ಬೆಳೆದಿರುವ ನುವಾಮಾ, ಪ್ರಸ್ತುತ 13 ಲಕ್ಷಕ್ಕೂ ಹೆಚ್ಚು ಶ್ರೀಮಂತ ಗ್ರಾಹಕರು ಮತ್ತು 4,750 ಕ್ಕೂ ಹೆಚ್ಚು ಭಾರತದ ಅತಿ ಶ್ರೀಮಂತ ಕುಟುಂಬಗಳಿಗೆ ಸೇವೆ ಒದಗಿಸುತ್ತಿದೆ. ಮಾರ್ಚ್ 2026ರ ಅಂತ್ಯದ ವೇಳೆಗೆ ಕಂಪನಿಯು ಒಟ್ಟು 4.52 ಲಕ್ಷ ಕೋಟಿ ರೂ. ಮೌಲ್ಯದ ಗ್ರಾಹಕರ ಆಸ್ತಿಯನ್ನು ನಿರ್ವಹಿಸುತ್ತಿದೆ. ಇದಲ್ಲದೆ, ಪರ್ಯಾಯ ಆಸ್ತಿ ನಿರ್ವಹಣೆ ವಿಭಾಗದಲ್ಲೂ 12,500 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ನುವಾಮಾ ನಿರ್ವಹಿಸುತ್ತಿದೆ.

ಕಾಮೆಂಟ್ ಬಿಡಿ

Join Us