ದೇಶ

ಭಾರತದಲ್ಲಿನ ತಮ್ಮ ಕೊನೆಯ ಕ್ಷಣದ ಸೆಲ್ಫಿ ಕ್ಲಿಕ್ಕಿಸಿಕೊಂಡಿತು ಕುಟುಂಬ

ಅಹಮದಾಬಾದ್‌: ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಒಂದೇ ಕುಟುಂಬದ ಐವರು ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. 

ಪ್ರತೀಕ್‌ ಜೋಶಿ, ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಪತ್ನಿ ಡಾ. ಕೋಮಿ ವ್ಯಾಸ್‌ ಮತ್ತು ಮೂರು ಮಕ್ಕಳೊಂದಿಗೆ ಲಂಡನ್‌ನಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಉದಯಪುರದಲ್ಲಿ ಪ್ರಸಿದ್ಧ ವೈದ್ಯೆಯಾಗಿದ್ದ ಕೋಮಿ, ಎರಡು ದಿನಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಪತಿಯೊಂದಿಗೆ ಲಂಡನ್‌ಗೆ ತೆರಳಲು ಸಜ್ಜಾಗಿದ್ದರು.

ಗುರುವಾರ ಬೆಳಗ್ಗೆ, ಭರವಸೆ ಮತ್ತು ಉತ್ಸಾಹದೊಂದಿಗೆ ಈ ಕುಟುಂಬ ಏರ್ ಇಂಡಿಯಾ ವಿಮಾನ 171ನ್ನು ಹತ್ತಿತು. ಭಾರತದಲ್ಲಿನ ತಮ್ಮ ಕೊನೆಯ ಕ್ಷಣವನ್ನು ಸೆರೆಹಿಡಿಯಲು ಕುಟುಂಬವು ಸೆಲ್ಫಿ ಕ್ಲಿಕ್ಕಿಸಿಕೊಂಡಿತು. ಆ ಸೆಲ್ಫಿಯನ್ನು ಸಂಬಂಧಿಕರಿಗೆ ಕಳುಹಿಸಿ ಖುಷಿಪಟ್ಟಿತು. ಆದರೆ, ಕೆಲವೇ ಗಂಟೆಗಳಲ್ಲಿ ದುರಂತ ಸಂಭವಿಸಿತು. ಅಹಮದಾಬಾದ್‌ನಲ್ಲಿ ವಿಮಾನವು ಹಾಸ್ಟೆಲ್‌ಗೆ ಡಿಕ್ಕಿಯಾಗಿ ಪತನಗೊಂಡಿತು. ಈ ಭೀಕರ ಅಪಘಾತದಲ್ಲಿ ಪ್ರತೀಕ್‌ ಜೋಶಿ, ಕೋಮಿ ವ್ಯಾಸ್‌ ಮತ್ತು ಆಕೆಯ ಮೂರು ಮಕ್ಕಳು ಸಾವಿಗೀಡಾದರು.

ಈ ದುರಂತವು ಕುಟುಂಬದ ಸಂಬಂಧಿಕರಿಗೆ ಮತ್ತು ಗೆಳೆಯರಿಗೆ ಆಘಾತವನ್ನುಂಟುಮಾಡಿದೆ. ಒಂದೇ ದಿನದಲ್ಲಿ ಐವರನ್ನು ಕಳೆದುಕೊಂಡ ಶೋಕವು ಗಾಂಧೀನಗರ ಮತ್ತು ಉದಯಪುರದಲ್ಲಿ ಮನೆಮಾಡಿದೆ.ಸಂಬಂಧಿಕರು ಕುಟುಂಬದ ಕೊನೆಯ ಸೆಲ್ಫಿಯನ್ನು ನೋಡಿ ಕಂಬನಿ ಮಿಡಿಯುತ್ತಿದ್ದಾರೆ. ಲಂಡನ್‌ನ ಭವಿಷ್ಯದ ಕನಸು ಕೇವಲ ಕೆಲವೇ ಗಂಟೆಗಳಲ್ಲಿ ಛಿದ್ರವಾಯಿತು. ಈ ದುರಂತವು ದೇಶಾದ್ಯಂತ ಜನರ ಮನಸ್ಸಿನಲ್ಲಿ ಆಳವಾದ ಗಾಯವನ್ನುಂಟುಮಾಡಿದೆ.

ಕಾಮೆಂಟ್ ಬಿಡಿ

Join Us