ಜಿಲ್ಲಾ ಸುದ್ದಿಗಳು

ವಿಟ್ಲ ಸುತ್ತಮುತ್ತ ವಿಮಾನ ಸುತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಮಂಗಳೂರು : ಗುರುವಾರ ಸಂಜೆ ಕರಾವಳಿಯುದ್ದಕ್ಕೂ ಸುರಿದ ಗುಡುಗು ಸಹಿತ ಭಾರೀ ಮಳೆಯ ಪರಿಣಾಮ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಇಳಿಯುವಿಕೆಯಲ್ಲಿ ವ್ಯತ್ಯಯ ಉಂಟಾಯಿತು. ಸುರಕ್ಷಿತ ಲ್ಯಾಂಡಿಂಗ್‌ಗಾಗಿ ವಿಮಾನಗಳು ಆಗಸದಲ್ಲೇ ಹಲವು ಸುತ್ತು ಸುತ್ತಾಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.ಮಂಗಳೂರು ಪ್ರವಾಸ ಮಾರ್ಗದರ್ಶಿ

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನವು ಸಂಜೆ ಲ್ಯಾಂಡಿಂಗ್‌ಗೆ ಪ್ರಯತ್ನಿಸಿತಾದರೂ, ದಟ್ಟ ಮೋಡ ಮತ್ತು ಮಳೆಯ ಕಾರಣದಿಂದ ಸಾಧ್ಯವಾಗಲಿಲ್ಲ. ಇದರಿಂದಾಗಿ ವಿಮಾನವು ಮೂಡಬಿದಿರೆ, ಬೆಳ್ತಂಗಡಿ, ಬಂಟ್ವಾಳ ಮತ್ತು ವಿಟ್ಲ ಭಾಗಗಳ ಆಗಸದಲ್ಲಿ ‘ಹೋಲ್ಡಿಂಗ್ ಪ್ಯಾಟರ್ನ್‌’ನಲ್ಲಿ ದೀರ್ಘಕಾಲ ಸುತ್ತಾಡಿತು.

ಕಡಿಮೆ ಎತ್ತರದಲ್ಲಿ ವಿಮಾನವು ಪದೇ ಪದೇ ಸುತ್ತುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಾಂತ್ರಿಕ ದೋಷವಿರಬಹುದು ಎಂದು ಶಂಕಿಸಿ ಗಾಬರಿಗೊಂಡರು. ವಿಟ್ಲ ಸುತ್ತಮುತ್ತ ವಿಮಾನ ಸುತ್ತುತ್ತಿರುವ ದೃಶ್ಯ ‘ಫ್ಲೈಟ್ ರಾಡಾರ್’ ಆ್ಯಪ್‌ನಲ್ಲಿಯೂ ಕಂಡುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂತಿಮವಾಗಿ ಹವಾಮಾನ ಸುಧಾರಿಸಿದ ನಂತರ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಒಟ್ಟು ಎರಡು ವಿಮಾನಗಳು ಈ ರೀತಿ ತೊಂದರೆ ಅನುಭವಿಸಿದ್ದು, ಸದ್ಯ ಅಪಾಯವಿಲ್ಲದೆ ಲ್ಯಾಂಡ್ ಆಗಿವೆ ಎಂದು ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.

ಕಾಮೆಂಟ್ ಬಿಡಿ

Join Us