10ನೇ ವಿದ್ಯಾರ್ಥಿನಿಯಾಗಿದ್ದಾಗ 60 ವರ್ಷದ ವ್ಯಕ್ತಿಯಿಂದ ನಿರಂತರ ಅತ್ಯಾಚಾರ
ವಾರಾಣಸಿ: ಬಾಲ್ಯದಿಂದಲೇ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಗೆ ಮದುವೆಯ ಬಳಿಕ ಧೈರ್ಯ ತುಂಬಿದ ಪತಿ, ಅತ್ಯಾಚಾರ ಎಸಗಿದ ದುರುಳನ ವಿರುದ್ಧ ದೂರು ಕೊಡಿಸಿದ ಘಟನೆ ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಮಿರ್ಜಾ ಮುರಾದ್‌ನಲ್ಲಿ ನಡೆದಿದೆ.
ಮಹಿಳೆಯು 2019ರಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ ಅತ್ಯಾಚಾರ ನಡೆದಿತ್ತು. ಆಕೆಯ ನೆರೆಮನೆಯ 60 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದ. ಬಳಿಕ ಬ್ಲ್ಯಾಕ್‌ಮೇಲ್ ಮಾಡಿ, ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ನೀಡಿದ ದೂರಿನ ಪ್ರಕಾರ ಆಕೆ ಕೋಚಿಂಗ್ ಸೆಂಟರ್ ಬಳಿ ಕಾಯುತ್ತಿದ್ದಾಗ, ಆಕೆಯ ನೆರೆಯ ದಶರಥ್ ಪಟೇಲ್ ಎಂಬಾತ ಮನೆಗೆ ಕರೆದೊಯ್ಯುವುದಾಗಿ ಹೇಳಿ ಆತನ ನಡೆಸುತ್ತಿದ್ದ ರೋಗಶಾಸ್ತ್ರ ಕೇಂದ್ರಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. 2019ರಲ್ಲಿ ಈ ಘಟನೆ ನಡೆದಿದ್ದು, ದುರುಳ ಬ್ಲ್ಯಾಕ್‌ಮೇಲ್ ಮಾಡಿ 2025ರವರೆಗೆ ಹೀಗೆಯೇ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಮಹಿಳೆ 2026ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದು, ತನ್ನ ಬಾಲ್ಯದ ಈ ಕಹಿ ಘಟನೆಯನ್ನು, ತನಗಾದ ದೌರ್ಜನ್ಯವನ್ನು ಹೇಳಿದ್ದಾಳೆ. ಈ ವೇಳೆ ನ್ಯಾಯಕ್ಕಾಗಿ ಜತೆಯಾಗಿ ಹೋರಾಡೋಣ ಎಂದು ಧೈರ್ಯ ತುಂಬಿದ ಪತಿ, ಪತ್ನಿಯಿಂದ ದೂರು ಕೊಡಿಸಿದ್ದಾನೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮಿರ್ಜಾಮುರಾದ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಗೋಪಾಲ್‌ಜಿ ಕುಶ್ವಾಹ, “ಆರೋಪಿ ದಶರಥ್ ಪಟೇಲ್ (60) ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ. ಸದ್ಯ ಆರೋಪಿಯ ಬಂಧನಕ್ಕೆ ತಂಡ ಮುಂದಾಗಿದೆ. ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಎಚ್‌ಒ ಹೇಳಿದ್ದಾರೆ.
ಕಾಮೆಂಟ್ ಬಿಡಿ