ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಅಮಾನತಿಗೆ ಕಾರಣಗಳು ಬೇರೆ
ಮೂಡುಬಿದಿರೆ: ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಅವರ ಮೇಲೆ ಟಿವಿ ವಾಹಿನಿಗಳಲ್ಲಿ ಬಂದ ಆರೋಪಗಳಿಗಾಗಿ ಅಥವಾ ಸುದ್ದಿಗೋಷ್ಠಿಯಲ್ಲಿ ಮಾಡಿದ ಆರೋಪಗಳ ಕಾರಣಗಳಿಗಾಗಿ ಅಲ್ಲವೇ ಅಲ್ಲ. ಫೋನಿನಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ಮಾತನಾಡಿರುವುದಕ್ಕೆ!ಯಾಕೆ ಹೀಗೆ ಎನ್ನುವ ವಿವರವನ್ನು ಪೊಲೀಸ್ ಕಮಿಷನರ್ ಸ್ಪಷ್ಟವಾಗಿ ವಿವರಿಸಿದ್ದಾರೆ.
ಇನ್ಸ್ಪೆಕ್ಟರ್ ಸಂದೇಶ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಎಸಿಪಿ (ACP) ಸಲ್ಲಿಸಿರುವ ತನಿಖಾ ವರದಿಯ ಸಾರಾಂಶ ಇಲ್ಲಿದೆ: ಇನ್‌ಸ್ಪೆಕ್ಟರ್ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳದ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಉತ್ತರ ಉಪವಿಭಾಗದ (ಪಣಂಬೂರು) ಎಸಿಪಿ ಅವರಿಗೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದರು. ಎಸಿಪಿ ಸಲ್ಲಿಸಿದ ಸುದೀರ್ಘ ತನಿಖಾ ವರದಿಯನ್ನು ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ.ದೂರುದಾರರ ಹಿನ್ನೆಲೆ ಮತ್ತು ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಕುತೂಹಲಕಾರಿ ಅಂಶಗಳು ವರದಿಯಲ್ಲಿ ಬೆಳಕಿಗೆ ಬಂದಿವೆ.
ಆರೋಪ ನಿರಾಕರಣೆ: ಇನ್‌ಸ್ಪೆಕ್ಟರ್ ವಿರುದ್ಧ ಸುಮತಿ ನಾಯ್ಕ್ ಎಂಬವರು ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಅವರ ಸಹೋದರಿ ಪ್ರಫುಲ್ಲಾ ನಾಯ್ಕ್ ದೂರು ನೀಡಿದ್ದಾರೆ.
ಕೌಟುಂಬಿಕ ವಿವಾದ: ಸುಮತಿ ಮತ್ತು ಪ್ರಫುಲ್ಲಾ ನಡುವೆ ಕೌಟುಂಬಿಕ ಕಲಹಗಳಿದ್ದು, ಇಬ್ಬರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಒಂದು ಪ್ರಕರಣವನ್ನು ಹೊರತುಪಡಿಸಿ ಉಳಿದೆಲ್ಲವಕ್ಕೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಲಂಚದ ಆರೋಪಕ್ಕೆ ಸಾಕ್ಷ್ಯವಿಲ್ಲ ಇನ್‌ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದ ಮತ್ತೊಬ್ಬ ಮಹಿಳೆ ಅವಿತಾ ಮಿನೇಜಸ್ ಅವರ ಪತಿಯ ವಿರುದ್ಧ ನಾಲ್ಕು ಪ್ರಕರಣಗಳಿದ್ದು, ಕಿಡ್ನಿ ಚಿಕಿತ್ಸೆಯ ಹಣ ದುರುಪಯೋಗಪಡಿಸಿಕೊಂಡ ಆರೋಪವೂ ಇವರ ಮೇಲಿದೆ. "ಲಂಚದ ಬೇಡಿಕೆ ಅಥವಾ ಕಿರುಕುಳಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಥಳದಲ್ಲಿದ್ದ ವಕೀಲರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ," ಎಂದು ಆಯುಕ್ತರು ತಿಳಿಸಿದ್ದಾರೆ.
"ಲಭ್ಯವಿರುವ ಆಡಿಯೋದಲ್ಲಿ ಇನ್‌ಸ್ಪೆಕ್ಟರ್ ಮಹಿಳೆಯೊಬ್ಬರ ಜೊತೆ ಅತ್ಯಂತ ಅಸಭ್ಯವಾಗಿ ಮಾತನಾಡಿರುವುದು ಕಂಡುಬಂದಿದೆ. ಆಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ಸದ್ಯ ದೂರು ನೀಡಲು ನಿರಾಕರಿಸಿದ್ದಾರೆ. ಅವರು ಬಯಸಿದಲ್ಲಿ ಮುಂದಿನ ದಿನಗಳಲ್ಲಿ ಹೇಳಿಕೆ ನೀಡಲು ಅವಕಾಶವಿದೆ." ಆಡಿಯೋ ಮತ್ತು ವಿಡಿಯೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಇನ್ಸ್ಪೆಕ್ಟರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspension) ಮಾಡಲಾಗಿದೆ. ಈ ಕುರಿತು ಇನ್ನು ಸವಿಸ್ತಾರವಾದ ಇಲಾಖಾ ತನಿಖೆ ನಡೆಯಲಿದೆ.
ಕಾಮೆಂಟ್ ಬಿಡಿ