ಉಜಿರೆಯ ಜಾತ್ರೆಗೆ ಬಂದಿದ್ದ ಅಪ್ರಾಪ್ತ ಬಾಲಕನಿಗೆ ಗುಂಪೊಂದು ಹಲ್ಲೆ
ಬೆಳ್ತಂಗಡಿ: ಉಜಿರೆಯ ಜಾತ್ರೆಗೆ ಬಂದಿದ್ದ ಅಪ್ರಾಪ್ತ ಬಾಲಕನಿಗೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಜಾತ್ರೆಯ ಸಂದರ್ಭ ನಡೆದಿದೆ.
ಒಂದು ವಾರದ ಹಿಂದೆ ಮಾರ್ಚ್ 11ರಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಜಾತ್ರೆಗೆ ಬಾಲಕ ತನ್ನ ಸ್ನೇಹಿತರೊಂದಿಗೆ ಬಂದಿದ್ದು ರಥಬೀದಿಯಲ್ಲಿ ಜಾಯಿಂಟ್ ವೀಲ್ ನೋಡಲು ಹೋಗಿದ್ದ. ಈ ವೇಳೆ, ಹಿಂದು ಹುಡುಗಿಯರ ಜೊತೆಗೆ ಬಂದಿದ್ದಾನೆಂದು ಆಕ್ಷೇಪಿಸಿದ ಅಲ್ಲಿದ್ದ ಕೆಲವರು ಬಾಲಕನನ್ನು ಬೈಕ್‌ನಲ್ಲಿ ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೈಕಿನಲ್ಲಿ ದೂರ ಕರೆತಂದು ಹಲ್ಲೆಗೈದು ನಿಂದಿಸಿ ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಬಿಟ್ಟು ಕಳುಹಿಸಿದ್ದರು.
ಘಟನೆಯಿಂದ ಭಯಗೊಂಡಿದ್ದ ಬಾಲಕ ಕೆಲವು ದಿನಗಳ ಬಳಿಕ ತನ್ನ ಮನೆಯಲ್ಲಿ ತಿಳಿಸಿದ್ದಾನೆ. ಅದರಂತೆ, ಮಾರ್ಚ್ 18ರಂದು ಘಟನೆಯ ಬಗ್ಗೆ ಬಾಲಕನ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಹಿಂದೂ ಸಂಘಟನೆಗೆ ಸೇರಿದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರು ಸೇರಿಕೊಂಡು ಬಾಲಕನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.
ಸಂತ್ರಸ್ತ 17 ವರ್ಷದ ಬಾಲಕ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್ಪಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ದೂರಿನ ಆಧಾರದಲ್ಲಿ ಹಲ್ಲೆ, ಕೊಲೆ ಬೆದರಿಕೆ, ಗುಂಪು ಹಲ್ಲೆ, ಜೀವಬೆದರಿಕೆ, ಅಪಹರಣ, ಆತ್ಮಹತ್ಯೆಗೆ ಪ್ರೇರಣೆಯ ಬಗ್ಗೆ ನೀಡಿರುವ ದೂರಿನಂತೆ ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರ ವಿರುದ್ಧ ಪೊಲೀಸರು BNS 137(2),115(2),351(2), 352, 353(2) ಜೊತೆಗೆ 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ವಿಶೇಷ ತಂಡವನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಕಾಮೆಂಟ್ ಬಿಡಿ