ಮಂಗಳೂರು: ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ ಎಂಬ ಖ್ಯಾತಿಯ ಮೂಡುಬಿದಿರೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಸೇರಿದಂತೆ ಮೂವರ ವಿರುದ್ಧ ಇದೀಗ ಕಂಬಳ ಸಮಿತಿ ಸದಸ್ಯರೊಬ್ಬರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ. ದ.ಕ. ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕಂಬಳ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿಮೂಡುಬಿದಿರೆ ಠಾಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕಂಬಳ ಕ್ರೀಡೆಯ ವೇಗ ನಿರ್ಣಯಕ್ಕೆ ಬಳಸಲಾದ ತಂತ್ರಜ್ಞಾನ ನಂಬಲನರ್ಹವಾಗಿದ್ದು, ಯಾವುದೇ ಅಧಿಕೃತ ಮಾನ್ಯತೆ ಅದಕ್ಕಿಲ್ಲ. ಹೀಗೆ ಪಡೆದ ತೀರ್ಪಿನ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರು. ದೇಣಿಗೆ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಶ್ರೀನಿವಾಸ ಗೌಡ ಅವರು ಉಸೇನ್ ಬೋಲ್ಟ ದಾಖಲೆ ಮುರಿದದ್ದೇ ಸುಳ್ಳು ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
ಕಂಬಳ ಅಕಾಡೆಮಿಯ ಗುಣಪಾಲ ಕಡಂಬ ಅವರನ್ನು ಮೊದಲ ಆರೋಪಿಯನ್ನಾಗಿ, ಶ್ರೀನಿವಾಸ ಗೌಡ ಅವರನ್ನು 2ನೇ ಆರೋಪಿ ಹಾಗೂ ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಸಂಸ್ಥೆಯ ಮಾಲೀಕ ರತ್ನಾಕರ್ ಅವರನ್ನು ಮೂರನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಕಂಬಳ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ ಎನ್ನಲಾದ ಶ್ರೀನಿವಾಸ ಗೌಡ ಹೆಸರಿನಲ್ಲಿ ಗುಣಪಾಲ ಕಡಂಬ ಹಲವು ನಕಲಿ ದಾಖಲೆ ಸೃಷ್ಟಿಸಿದ್ದು, ಕಂಬಳ ಅಭಿಮಾನಿಗಳು, ಮಾಧ್ಯಮ, ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮೋಸದಿಂದ ನಡೆದುಕೊಂಡಿದ್ದಾರೆ. ಈ ಮೂಲಕ ಮೂವರೂ ಆರೋಪಿಗಳು ನಕಲಿ ದಾಖಲೆ ಮತ್ತು ದಾಸ್ತವೇಜು ಸೃಷ್ಟಿಸುವ ಮೂಲಕ ಸರ್ಕಾರ ಮತ್ತು ಸಾರ್ವಜನಿಕ ವಲಯದಿಂದ ಲಕ್ಷಾಂತರ ರು. ದೇಣಿಗೆ ಪಡೆದು ಯಾವುದೇ ಲೆಕ್ಕಪತ್ರ ಮಾಡದೆ ವಂಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.