ಅನಾರೋಗ್ಯ ಪಿಡಿತರಿಗೆ ಸಹಾಯಧನ; ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ಅನಾರೋಗ್ಯ ಪಿಡಿತರಿಗೆ ಸಹಾಯಧನ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗ್ರಾಮ ಪಂಚಾಯಿತಿಗೆ ಸಿಸಿ ಕ್ಯಾಮರಾ ವಿತರಿಸುವ ಮೂಲಕ 11ನೇ ವಾರ್ಷಿಕೋತ್ಸವ ಆಚರಿಸಿದ ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ) ನೈನಾಡು.
ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ಈ ಬಾರಿಯ ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ) ಇವರ 11ನೇ ವಾರ್ಷಿಕೋತ್ಸವ ಕಾರ್ಯಕ್ರಮ 22 ಜನರಿಗೆ ಸಹಾಯಧನ ವಿತರಿಸುವ ಮೂಲಕ ಅದ್ದೂರಿಯಾಗಿ ಜರುಗಿತು.
ಜಾತಿ ,ಧರ್ಮದ ಹಂಗಿಲ್ಲದೆ ಸಮಾಜದ ದುರ್ಬಲ ವರ್ಗದವರ ನೆರವಿಗೆ ಸದಾ ಸ್ಪಂದಿಸುವ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಗೆಳೆಯರ ಬಳಗ ಸೇವಾ ಸಂಸ್ಥೆಯ ಸೇವಾ ಕಾರ್ಯವು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಮಾಜಿ ಸಚಿವರಾದ ಶ್ರೀ ರಮಾನಾಥ ರೈಯವರು ಗೆಳೆಯರ ಬಳಗ ಸೇವಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಅಮ್ಟೂರು ಅವರು GBSS ವಿವಿದೋದ್ದೇಶ ಕೊ ಆಪಾರೆಟಿವ್ ಸೊಸೈಟಿಯ ಲೋಗೋ ಅನಾವರಣಗೊಳಿಸಿದರು. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತ ಸಂಸ್ಥೆಯ ಸೇವಾ ಕಾರ್ಯಕ್ರಮಗಳಿಗೆ ಅಭಿನಂದನೆ ಸಲ್ಲಿಸಿದರು, ಅಲ್ಲದೆ ಗೌರವಾಧ್ಯಕ್ಷರಾದ ನೆಲ್ವಿಸ್ಟರ್ ಪಿಂಟೊ ರವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕರಾದ ಶ್ರೀ ಜೆರಾಲ್ಡ್ ಮೋರಾಸ್, ಶ್ರೀಮತಿ ಲಿಲ್ಲಿ ಪಾಯ್ಸ್, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಮತಿ ಚೇತನಾ, ಕ್ರೀಡಾ ಕ್ಷೇತ್ರದ ಸಾಧಕ ಶ್ರೀ ಸುಹಾಸ್ ಇವರನ್ನು ಜವಾಹರ್ ಬಲ್ ಮಂಚ್ ಜಿಲ್ಲಾ ಅಧ್ಯಕ್ಷರಾದ ಶೈಲಜಾ ರಾಜೇಶ್ ರವರು ಸನ್ಮಾನಿಸಿದರು ಮತ್ತು ಸಂಸ್ಥೆಯು ಎಲ್ಲಾ ಕ್ಷೇತ್ರಗಳಿಗೆ ನೀಡುವ ಕೊಡುಗೆಯನ್ನು ಸ್ಮರಿಸಿದರು. ನಯನಾಡಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಲಾಯಿತು. ಪುಂಜಾಲಕಟ್ಟೆ ಠಾಣಾಧಿಕಾರಿಗಳು ಶ್ರೀ ಸಿಕಂದರ್ ಪಾಷಾ ರವರು ಅನಾರೋಗ್ಯದಿಂದ ಬಳಲುತ್ತಿರುವ 12 ಬಡ ಕುಟುಂಬದ ಸದಸ್ಯರಿಗೆ ಸಹಾಯಧನ ವಿತರಿಸಿದರು. ಸುಮಾರು ಹತ್ತು ಮಂದಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೂಡ ನೀಡಲಾಯಿತು. ಸ್ವಚ್ಛತೆಗಾಗಿ ದುಡಿಯುವ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳ ವೇತನದ ಪ್ರಯುಕ್ತ ರೂಪಾಯಿ 10 ಸಾವಿರ ವಿತರಿಸಲಾಯಿತು.
ಗ್ರಾಮೀಣ ಪ್ರದೇಶದ ಸ್ವಚ್ಛತೆಗೆ ವಿಶೇಷ ಆದ್ಯತೆಯನ್ನು ನೀಡಿ ಪಿಲಾತಬೆಟ್ಟು ಗ್ರಾಮ ಪಂಚಾಯತಿಗೆ ಸಿಸಿ ಕ್ಯಾಮರವನ್ನು ಹಸ್ತಾಂತರಿಸಲಾಯಿತು. ಮಡಂತ್ಯಾರಿನ ಶಿಶುವಿಹಾರ ಚಿಕ್ಕ ಮಕ್ಕಳ ಶಾಲೆಗೆ 30 ಕುರ್ಚಿಗಳು, 6 ಮೇಜು ಹಾಗೂ ಸಿಸಿ ಕ್ಯಾಮೆರಾದ ಆಶ್ವಾಸನೆ ನೀಡಿದರು. ಫ್ರಾನ್ಸಿಸ್ ಆಸ್ಸಿಸಿ ಚರ್ಚಿನ ಧರ್ಮ ಗುರುಗಳು ಅನಿಲ್ ಅವಿಲ್ಡ್ ಲೋಬೋ ಅವರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಗೆಳೆಯರ ಬಳಗ ಸೇವಾ ಸಂಸ್ಥೆಯ ಮುತುವರ್ಜಿಯಲ್ಲಿ ರಸ್ತೆ ನಿರ್ಮಿಸಲು ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ತಾಂಬುಲ ಕಲಾವಿದರ "ಎಲ್ಲೇ ದಾದಾ ಎರೆಗ್ ಗೊತ್ತು " ಎಂಬ ತುಳು ನಾಟಕವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು .
ಉದ್ಯಮಿ ಮತ್ತು GBSS ನಿರ್ದೇಶಕರಾದ ಶ್ರೀ ವಸಂತ ಕೊಳಂಬೆಗುರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ, ಪ್ರಮುಖರಾದ ಶ್ರೀ ಲಾದ್ರು ಮಿನೇಜಸ್, ವಕೀಲರಾದ ಕುಮಾರಿ ಕೀರ್ತಿ ರೊಡ್ರಿಗಸ್, ದಿವಾಕರ ಶೆಟ್ಟಿ, ಉದಯಕುಮಾರ್, ಸುಪ್ರಿತ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾದ ಶ್ರೀ ನೆಲ್ವಿಸ್ಟರ್ ಪಿಂಟೋ ಅವರು ಸಂಸ್ಥೆಗೆ ಬೆಂಬಲಾಗಿ ನಿಂತ ಹಿತೈಷಿಗಳಿಗೆ ಕೊಡುಗೈ ದಾನಿಗಳಿಗೆ ದೇವರ ಆಶೀರ್ವಾದವನ್ನು ಕೋರಿದರು. ಡಿ-ಬಿಟ್ಸ್ ಅರೇಂಜರ್ಸ್ ರವರು ಕಾರ್ಯಕ್ರಮದ ಲೈಟಿಂಗ್ ಹಾಗೂ ಇತರ ವ್ಯವಸ್ಥೆ ಮಾಡಿದರೆ, ಏಂಜಲ್ ಡೆಕೋರೇಷನ್ ಮತ್ತು ಇವೆಂಟ್ ರವರು ಸ್ಟೇಜ್ ಡೆಕೋರೇಷನ್ ಮಾಡಿದರು. GBSS ಅಧ್ಯಕ್ಷರಾದ ಶ್ರೀ ಡೋನ್ ಪ್ರವೀಣ್ ಕ್ರಾಸ್ತಾ ಸ್ವಾಗತಿಸಿ, ನಿರ್ದೇಶಕರಾದ ಅರುಣ್ ಫೆರ್ನಾಂಡಿಸ್ ಅವರು ವಂದಿಸಿದರು.
ಕಾಮೆಂಟ್ ಬಿಡಿ