ಮಂಗಳೂರು: ದೇಶದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುತ್ತಿರುವ ಬುಡಕಟ್ಟು ಸಮುದಾಯದ ಮೊದಲನೆಯವರಾಗಿ ದ್ರೌಪದಿ ಮುರ್ಮು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನ ಪ್ರವೇಶಿಸುವ ಈ ಶುಭ ಸಂದರ್ಭವನ್ನು ಸ್ವಾಗತಿಸುವ ತೆರದಲ್ಲಿ ಯಕ್ಷಗಾನದ ಗಾಯನವೊಂದು ವೈರಲ್ ಆಗುತ್ತಿದೆ.
ಉದಯೋನ್ಮುಖ ಯಕ್ಷ ಪ್ರತಿಭೆ ಕು. ಚಿಂತನಾ ಹೆಗಡೆ ಮಾಲ್ಕೋಡ್ ಭಾಗವತಿಕೆ ಮಾಡಿರುವ 'ಹೆಜ್ಜೆ ಇರಿಸಿದಳು ದ್ರೌಪದಿ ರಾಷ್ಟ್ರಪತಿ ಭವನದಲಿ' ಯಕ್ಷಗಾನ ಪದ್ಯ ಸಖತ್ ಟ್ರೆಂಡ್ ಆಗುತ್ತಿದೆ. ಮಹಾಭಾರತ ಕಥೆಯ ಪ್ರಧಾನ ಪಾತ್ರ ದೌಪದಿಯ ಹೆಸರನ್ನು ಹೊಂದಿರುವ ನೂತನ ರಾಷ್ಟ್ರಪತಿಯವರನ್ನು ಮಹಾಭಾರತ ಪಾತ್ರಗಳಿಗನ್ವಯವಾಗುವಂತೆ ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರುವಂತೆ ಸಾಹಿತ್ಯ
ಮಹಾಭಾರತದ ಪಾತ್ರಗಳಿಗೆ ಅನ್ವಯ ಮಾಡುತ್ತಲೇ ಪ್ರಸ್ತುತದ ಸನ್ನಿವೇಶಗಳ ಪರಿಕಲ್ಪನೆಗಳಿಗೆ ಮುಖಾಮುಖಿಯಾಗಿಸುವಂತೆ ಸಾಹಿತ್ಯ ರಚಿಸಲಾಗಿದೆ. ಅಲ್ಲದೆ ಸದ್ಯ ಪರಿಹಾರವಾಗಬೇಕಾದ ಸಮಸ್ಯೆಗಳ ಬಗ್ಗೆಯೂ ಸೂಚ್ಯವಾಗಿ ರಾಷ್ಟ್ರಪತಿಯವರಿಗೆ ಬಿನ್ನಪ ಮಾಡುವ ಮೂಲಕ ಅವರನ್ನು ರಾಷ್ಟ್ರಪತಿ ಭವನದೊಳಗೆ ಸ್ವಾಗತಿಸಲಾಗಿದೆ. ಕು. ಚಿಂತನಾ ಹೆಗಡೆ ಮಾಲ್ಕೋಡ್ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರಿದ್ದಾರೆ.