ಸಾಹಿತ್ಯ ಲೋಕ

ಉಡುಪಿಯಲ್ಲಿ 'ನುಡಿ ತೋರಣ' ಸಾಹಿತ್ಯ ವೇದಿಕೆ -ರಾಜ್ಯ ಬಳಗದ ನಾಲ್ಕನೇ ವಾರ್ಷಿಕೋತ್ಸವ

ಉಡುಪಿ: ಕನ್ನಡ ನಾಡು - ನುಡಿ ನಮಗೆ ಹೆಮ್ಮೆ . ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಮಾನ್ಯತೆ ನೀಡಿ ಅದರ ಬೆಳವಣಿಗೆಗಾಗಿ ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿರುವ ವೇದಿಕೆ ' ನುಡಿ ತೋರಣ'.ಈ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವ ಶ್ರೀ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನ,ಉಡುಪಿಯಲ್ಲಿ 23, 24 ಎರಡು ದಿನಗಳ ಕಾಲ ನಡೆದು  ಸಾಹಿತ್ಯ ಪ್ರೇಮಿಗಳ - ಊರ ಪರವೂರ ಸಜ್ಜನರ ಗಮನ ಸೆಳೆದಿರುವುದು ಶ್ಲಾಘನೀಯ.

ಮೊದಲನೆಯ ದಿನ  ಪೂರ್ವಾಹ್ಣ ಹತ್ತು ಗಂಟೆಗೆ ಹಿರಿಯ ಸಾಹಿತಿ  ಮತ್ತು  ನಿವೃತ್ತ ನ್ಯಾಯವಾದಿ ಶ್ರೀ ಎ.ಎಸ್.ಎನ್. ಹೆಬ್ಬಾರ್ , ಕುಂದಾಪುರ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆರಂಭಗೊಂಡಿತು.ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ , ಚಿಂತಕ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳ ತಜ್ಞರಾದ ಶ್ರೀ ಪ್ರೇಮ ಶೇಖರ್ ಅವರು ಉಪಸ್ಥಿತರಿದ್ದರು. ಶ್ರೀ ಪ್ರೇಮಶೇಖರ್ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾಹಿತ್ಯ ಸಾಧಕರಾದ ಶ್ರೀಮತಿ ರಾಧಾ ಟೇಕಲ್ ಬೆಂಗಳೂರು , ಶ್ರೀಮತಿ  ಶೈಲಾ ಜಯಕುಮಾರ್  ಮತ್ತು ಉಡುಪಿಯ ಶ್ರೀಮತಿ ಶೋಭಾ ಹರಿಪ್ರಸಾದ್ ಇವರಿಗೆ ' ರಾಜ್ಯ ಮಟ್ಟದ ನುಡಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಮುಖ್ಯ ಅತಿಥಿಗಳಾದ ಶ್ರೀಯುತ ಪ್ರೇಮ ಶೇಖರ್ ಅವರು ಸಾಹಿತ್ಯ ಪರಿಪೂರ್ಣ ರೀತಿಯಲ್ಲಿ ಬೆಳೆಯ ಬೇಕಾದರೆ ಸಾಹಿತಿಗಳಲ್ಲಿ ಇರ ಬೇಕಾದ ಅತ್ಯಗತ್ಯವಾದ  ನಿಷ್ಠೆ , ನಿಸ್ವಾರ್ಥ ಭಾವ , ಭಾಷಾ ಪ್ರೇಮ ಇವುಗಳ ಕುರಿತಾಗಿ ತಿಳಿಸಿದರಲ್ಲದೆ ಸಾಹಿತ್ಯವನು ಹೆಸರು ಪ್ರತಿಷ್ಠೆಗಾಗಿ ಬಳಸಿಕೊಳ್ಳ ಬಾರದು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಮಕ್ಕಳು  ಬಹಳ ಜಾಗ್ರತೆಯಿಂದ ಇರ ಬೇಕು ಎಂದು ತಿಳಿಸಿದರು. 

ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶ್ರೀಯುತ ಎ., ಎಸ್ , ಎನ್. ಹೆಬ್ಬಾರರು  ತಮ್ಮದೇ ಆದ ವಿಶೇಷ ಹಾಸ್ಯ ತುಣುಕುಗಳ ಮೂಲಕ ಕನ್ನಡದ ಪ್ರಾಮುಖ್ಯತೆಯನ್ನು ವಿವರಿಸಿದರಲ್ಲದೆ ಕುಂದಾಪ್ರ ಕನ್ನಡದ ಸೊಗಸಾದ ಕವಿತೆಯೊಂದರ ವಾಚನಗೈದರು.ಬಳಿಕ ಶ್ರೀ ಕಿರಣ್ ಹಿರಿಸಾವೆ  ಅವರ  ಕಥಾ ಸಂಕಲನ 'ಆ ಐದು ನಿಮಿಷಗಳು ' ಡಾ. ಜಿ.ಎಸ್ ಸರೋಜಾ ಅವರು ಹಿಂದಿಗೆ ಅನುವಾದಿಸಿದ ' ವೋ ಪಾಂಚ್ ಮಿನಟ್ ( ಶ್ರೀ ಕಿರಣ್ ಹಿರಿಸಾವೆ ಅವರ ಕಥಾ ಸಂಕಲನದ ರೂಪಾಂತರ*) , ಶ್ರೀ  ಶ್ರೀಕಾಂತ್ ಪತ್ರೆ ಇವರ  ಕವನ ಸಂಕಲನ ' ವ್ಯಕ್ತ ಪತ್ರೆಗಳು' ,ಶ್ರೀಮತಿ ಮಧು ವಸ್ತ್ರದ ಅವರ  ಕವನ ಸಂಕಲನ  ಚೈತ್ರದ ಚಿಗುರು ' , ಶ್ರೀಮತಿ ವಿಜಯಾ ನಿರ್ಮಲ ಅವರ ಮಹಿಳಾ ಸಾಧಕರ ಪರಿಚಯ ಕೃತಿ ' ' ಆಧುನಿಕ ಕನ್ನಡ ಸಾಧಕಿಯರು " , ಶ್ರೀಮತಿ ಜಯಶ್ರೀ ರಾಜು ಅವರ " ನುಡಿ ತೋರಣ 2026 ಕಥಾ ಸಂಕಲನ" ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡು ಪ್ರಬುದ್ಧ ಸಾಹಿತಿಗಳ ಮೂಲಕ ಪರಿಚಯಿಸಲ್ಪಟ್ಟವು. ಶ್ರೀ ಸಂಧ್ಯಾ ಶೆಣೈ ಉಪಸ್ಥಿತರಿದ್ದರು.

ಅಪರಾಹ್ಣ ಮೂರು ಗಂಟೆಗೆ ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರ ಘನ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.  ವಿವಿಧ ಹಿಂದು ಮಾಸಗಳಲ್ಲಿ ಜನಿಸಿದ  ಹಿರಿಯ ಗಣ್ಯ ಕವಿಗಳ ಕವಿತೆಗಳನ್ನು ವೇದಿಕೆಯ ಸದಸ್ಯರು ವಾಚಿಸಿದರು. ಬಳಿಕ ಶ್ರೀಮತಿ ಮಧು ವಸ್ತ್ರದ ಅವರ ಸಾರಥ್ಯದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಂಭ್ರಮದಿಂದ ವೇದಿಕೆಯ ಸದಸ್ಯರು ಪಾಲ್ಗೊಂಡರು. ಯಕ್ಷಗಾನ ನೃತ್ಯ , ಆಶಯ ಗೀತೆಗಳು  , ನಟನಾ ನೃತ್ಯ , ಗಾಯನ , ರೂಪಕ ಇತ್ಯಾದಿ ಮನಮೋಹಕವಾಗಿದ್ದವು. ಡಾ. ಮೀರಾ‌ ಬೆಂಗಳೂರು ಇವರಿಂದ  ನಡೆಯಲ್ಪಟ್ಟ 'ಪಂಚ ವರ್ಣಿ' ಏಕ ವ್ಯಕ್ತಿ ರಂಗ ಪ್ರದರ್ಶನ ಅದ್ಭುತವಾಗಿತ್ತು.24ರ ಭಾನುವಾರ ಬೆಳಿಗ್ಗೆ ಪ್ರಸಿದ್ಧ ಲೇಖಕ , ಕೃತಿ ರಚನೆಕಾರ ಶ್ರೀ ಸಂತೋಷ ಮೆಹಂದಳೆ ಅವರ ಜೊತೆಗೆ  ಸಂವಾದ ಕಾರ್ಯಕ್ರಮವಿತ್ತು. ಸಾಹಿತ್ಯದ ಬಗ್ಗೆ ತನ್ನ ನಿಲುವನ್ನು ವ್ಯಕ್ತ ಪಡಿಸಿದರು ಮಾತ್ರವಲ್ಲದೆ ಯುವ ಬರೆಹಗಾರರಿಗೆ ಮಾರ್ಗದರ್ಶನ ನೀಡಿದರು‌.ತನ್ನದೇ ಆದ ವಿಶೇಷ ವ್ಯಕ್ತಿತ್ವ ಬೆಳೆಸಿಕೊಂಡವರು. ತನಗನಿಸಿದ್ದನ್ನು ಹೇಳಿಯೇ ಮುಗಿಸುವವರು. ಹಾಗೆಂದೂ ಎಲ್ಲವನ್ನು ಒಪ್ಪ ಬೇಕಿಲ್ಲ- ಉತ್ತಮ ಕಾರ್ಯಕ್ರಮ.
 
ಸಮಾರೋಪ ಸಮಾರಂಭದಲ್ಲಿ ಶ್ರೀಯುತ ನರೇಂದ್ರ ರೈ ದೇರ್ಲ ಅವರ ಭಾಷಣ - ಅದರೊಳಗಿನ ಸೂಕ್ಷ್ಮತೆ , ಕೊಟ್ಟ ನಿದರ್ಶನಗಳು - ಅರಿಯ ಬೇಕಾದ ಅಂಶಗಳು.- ಇಷ್ಟವಾದವು.  ಹಿರಿಯ ಸಾಹಿತಿ ನುಡಿ ಭೂಷಣ ಶ್ರೀ ತನಾಶಿ ಅವರ ಕಿವಿ ಮಾತು ಮನಸೆಳೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಮತ್ತು ಅಂಕಣಕಾರರನ್ನು ಸನ್ಮಾನಿಸಲಾಯಿತು. ಹಾಜರಾದ ಸರ್ವರಿಗೂ ಎಂದಿನಂತೆ ನುಡಿ ಬಾಗಿನ ನೀಡಿ ಸತ್ಕರಿಸಿದ್ದು ವಿಶೇಷ. ಉಡುಪಿಯವರೇ ಆದ ಬೀದರ್ ನಲ್ಲಿ ವಾಸವಿರುವ ಶ್ರೀಮತಿ ಕ್ಷಮಾರಾಮ್ ಮತ್ತು ಅವರ ಪತಿ ಶ್ರೀ ರಘುರಾಮ್ ಉಪಾಧ್ಯಾಯರು ಕಾರ್ಯಕ್ರಮದ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದು ವೇದಿಕೆಯ ಮುಖ್ಯರು ಮತ್ತು ಕಾರ್ಯ ನಿರ್ವಾಹಕ ಬಳಗದ ಪರಿಶ್ರಮ‌ ಎದ್ದು ಕಾಣುತ್ತಿತ್ತು.ಶ್ರೀ ಶ್ರೀಕಾಂತ್ ಪತ್ರೆಮಠ , ಶ್ರೀ ಕಿರಣ್ ಹಿರಿಸಾವೆ ,ಶ್ರೀ ವೇಣುಗೋಪಾಲ್ , ಶ್ರೀ ರಾ. ಸು. ವೆಂಕಟೇಶ್ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮ ಸಾಹಿತ್ಯದ ಜಾತ್ರೆಯಾಗಿತ್ತು.ಉಡುಪಿಯ ಸೀತಾ ಬುಕ್ ಹೌಸ್ ಇವರಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಕಾಮೆಂಟ್ ಬಿಡಿ

Join Us