ಸಿನಿಮಾ

ಅಭಿನಯ ಸರಸ್ವತಿ ಬಿ.ಸರೋಜಾದೇವಿ ವಿಧಿವಶ

ಬೆಂಗಳೂರು: ಹಿರಿಯ ನಟಿ ಬಿ ಸರೋಜಾದೇವಿ ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ವಿಧಿವಶ. ಸರೋಜಾದೇವಿ ಅವರು ಪ್ರತಿನಿತ್ಯ ಬೆಳಗ್ಗೆ ಎದ್ದು ಪೇಪರ್‌ ಓದುತ್ತಿದ್ದರು. ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿನ್ನುತ್ತಿದ್ದರು. ಇಂದು ಸ್ನಾನ ಮಾಡಿ ಪೂಜೆ ಮಾಡಿದ ಬಳಿಕ ಬೆಳಗ್ಗೆ 9 ಗಂಟೆಯ ವೇಳೆಗೆ ಟಿವಿ ಆನ್‌ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು ಮತ್ತು ಅರೆಪ್ರಜ್ಞಾವಸ್ಥೆಗೆ ಹೋದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿಸಿದರು.ಸರೋಜಾ ದೇವಿ ಅವರ ತಾಯಿಯನ್ನು ಎಲ್ಲಿ ಮಣ್ಣು ಮಾಡಲಾಗಿದೆಯೋ ಅಲ್ಲೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಹೇಳಿದರು. 

ಶಿಸ್ತಿನ ನಟಿ, ಅವರ ರೀತಿ ಈಗಿನ ಯಾವ ನಟಿಯರೂ ಇಲ್ಲ. ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಸರೋಜಾದೇವಿಯವರು ಇದನ್ನೆಲ್ಲ ಮಾಡಲೇ ಇಲ್ಲ. ನಾಲ್ಕು ಭಾಷೆಯಲ್ಲಿ ನಟಿಸೋದು ಅಂದರೆ ಸಣ್ಣ ಮಾತಲ್ಲ. ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿದರು. ಅವರು ಎಷ್ಟೇ ಬೆಳೆದರೂ ಕೂಡ ಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ, ಭಾಗ್ಯವಂತರು ಅಂತಹ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಕೆಲವರಾದರೆ ಕನ್ನಡವನ್ನೇ ಮರೆತು ಬಿಡುತ್ತಿದ್ದರು. ಆದರೆ ಇವರು ಯಾವತ್ತೂ ಕನ್ನಡವನ್ನು ಮರೆಯಲಿಲ್ಲ. ಅಚ್ಚ ಕನ್ನಡದ ನಟಿ, ತುಂಬಾ ಎತ್ತರಕ್ಕೆ ಬೆಳೆದವರು. ಅವರ ಮಟ್ಟಕ್ಕೆ ಯಾರೂ ತಲುಪಲೇ ಇಲ್ಲ. 

ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಿ.ಸರೋಜಾದೇವಿ ದಕ್ಷಿಣ ಭಾರತದ ಧೀಮಂತ ಅಭಿನೇತ್ರಿ. ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಪುರಸ್ಕೃತರಾಗಿರುವ ಸರೋಜಾದೇವಿ ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಜನವರಿ 7, 1938 ರಲ್ಲಿ ಜನಿಸಿದ ಹಿರಿಯ ನಟಿ ಬಿ ಸರೋಜಾದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅಂತ್ಯಕ್ರಿಯೆ ನಡೆಯಲಿದೆ.

ಕಾಮೆಂಟ್ ಬಿಡಿ

Join Us