ಮುನೀರ್ ಕಾಟಿಪಳ್ಳ: ಹಿಂದು ವಿದ್ಯಾರ್ಥಿನಿಗೆ ಅನ್ಯಾಯದ ವಿರುದ್ಧ ಬೀದಿಗೆ ಇಳಿಯಬಹುದೆ
ಮುನೀರ್ ಕಾಟಿಪಳ್ಳ: ತಿಂಗಳ ಹಿಂದೆಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗು ರೋಗಿಯ ಕುಟುಂಬಸ್ಥರ ನಡುವೆ ನಡೆದ ಸಾಮಾನ್ಯ ಮಾತಿನ ಚಕಮಕಿ (ರೋಗಿಯ ಕುಟುಂಬ ಮುಸ್ಲಿಂ ಸಮುದಾಯಕ್ಕೆ ಸೇರಿತ್ತು) ಗಂಭೀರ ಸ್ವರೂಪ ತಾಳಿದ್ದು, ಭಾರತ ವೈದ್ಯರ ಸಂಘ (ಐಎಂಎ) ಸಂಘಪರಿವಾರದ ಜನರೊಂದಿಗೆ ಸೇರಿ ಪೊಲೀಸ್ ಠಾಣೆಗೆ ಆರು ಗಂಟೆಗಳ ಕಾಲ ಮುತ್ತಿಗೆ ಹಾಕಿದ್ದು, ಬಿಜೆಪಿ, ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಗ್ರ ಭಾಷಣ ಮಾಡಿ ಮುಸ್ಲಿಂ ಕಟುಂಬವನ್ನು ಬಂಧಿಸುವಂತೆ ಪೊಲೀಸರಿಗೆ ತಾಕೀತು, ಎಚ್ಚರಿಕೆ ನೀಡಿದ್ದು ನಿಮಗೆ ನೆನಪಿರಬಹುದು.
ಈಗ ಪುತ್ತೂರಿನಲ್ಲಿ ಹಿಂದು ವಿದ್ಯಾರ್ಥಿನಿಯೊಬ್ಬಳನ್ನು, ಬಿಜೆಪಿಯ ಹಿರಿಯ ನೇತಾರನ ಪುತ್ರನೊಬ್ಬ ಪ್ರೀತಿಸಿ, ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿಸಿ ವಂಚಿಸಿರುವುದು, ಆತನ ಕುಟುಂಬ ಮದುವೆ ಮಾಡಲು ಒಪ್ಪದೆ ಗರ್ಭ ಪಾತಕ್ಕೆ ಒತ್ತಾಯಿಸಿರುವುದು ದೊಡ್ಡ ಸುದ್ದಿಯಾಗಿದೆ. ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತೂರಿನ ಬಿಜೆಪಿ, ಪರಿವಾರದ ನಾಯಕರಲ್ಲಿ ವಿದ್ಯಾರ್ಥಿನಿಯ ಕುಟುಂಬ ದೂರು ನೀಡಿ ನ್ಯಾಯಕೊಡಿಸುವಂತೆ ಅಂಗಲಾಚಿರುವುದೂ ಸುದ್ದಿಯಾಗಿದೆ. ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದೂ ಸಂತ್ರಸ್ತ ಕುಟುಂಬ ಆರೋಪಿಸಿದೆ.
ಅಂದು ವೈದ್ಯರು - ಮುಸ್ಲಿಂ ಕುಟುಂಬದ ನಡುವಿನ ಸಾಮಾನ್ಯ ಮಾತಿನ ಚಕಮಕಿಯ ಪ್ರಕರಣದಲ್ಲಿ ಠಾಣೆಗೆ ಮುತ್ತಿಗೆ, ರಸ್ತೆ ತಡೆ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಮುಸ್ಲಿಂ ಕುಟುಂಬವನ್ನು ಬಂಧಿಸುವಂತೆ ಪೊಲೀಸರಿಗೆ ಎಚ್ಚರಿಕೆ, ಬೆದರಿಕೆ ದಾಟಿಯಲ್ಲಿ ಭಾಷಣ ಮಾಡಿದ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಪರಿವಾರದ ನಾಯಕರು ಈಗ ಹಿಂದು ವಿದ್ಯಾರ್ಥಿನಿಗೆ ಆಗಿರುವ ಘೋರ ಅನ್ಯಾಯದ ವಿರುದ್ಧ ಬೀದಿಗೆ ಇಳಿಯಬಹುದೆ ? ಪುತ್ತೂರು ಪೊಲೀಸ್ ಠಾಣೆಗೆ ಮೆರವಣಿಗೆಯಲ್ಲಿ ಹೋಗಿ ಮುತ್ತಿಗೆ ಹಾಕಬಹುದೆ ? ವಿದ್ಯಾರ್ಥಿನಿಯನ್ನು ಗರ್ಭಿಣಿಯನ್ನಾಗಿಸಿ ಮದುವೆಗೆ ನಿರಾಕರಿಸಿದ ಬಿಜೆಪಿ ನಾಯಕನ ಪುತ್ರ ಹಾಗು ಆತನಿಗೆ ಬೆಂಬಲವಾಗಿ ನಿಂತ ಪೋಷಕರನ್ನು ತಕ್ಷಣ ಬಂಧಿಸುವಂತೆ ಉಗ್ರ ಭಾಷಣದ ಮೂಲಕ ಪೊಲೀಸರಿಗೆ ತಾಕೀತು,ಇಲ್ಲದಿದ್ದಲ್ಲಿ ಪುತ್ತೂರು ಬಂದ್ ಮಾಡುವ ಎಚ್ಚರಿಕೆ ನೀಡಬಹುದೆ ?
ಕಾಮೆಂಟ್ ಬಿಡಿ