ಇರುಮಡಿ ತಲೆ ಮೇಲೆ ಇಟ್ಟು ಅಯ್ಯಪ್ಪನ ದರ್ಶನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಶಬರಿಮಲೆ: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಪಂಪಾ ಮೂಲಕ ವಿಶೇಷ ವಾಹನದಲ್ಲಿ ಶಬರಿಮಲೆಗೆ ತೆರಳಿದ ರಾಷ್ಟ್ರಪತಿಗಳು ಹದಿನೆಂಟು ಮೆಟ್ಟಿಲೇರಿ ಅಯ್ಯಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಾಲ್ಕು ದಿನಗಳ ಕಾಲ ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಶಬರಿಮಲೆಗೆ ಆಗಮಿಸಿದ್ದಾರೆ. ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಕೇರಳದ ಪಟ್ಟಣಂತಿಟ್ಟ ಬಳಿಯ ಪ್ರಮದಂ ಗೆ ಬಂದ ಅವರು ಬಳಿಕ ವಾಹನದಲ್ಲಿ ಪಂಪೆಗೆ ಆಗಮಿಸಿದ್ದಾರೆ. ಪಂಪಾ ನದಿಯಲ್ಲಿ ಸ್ನಾನ ಮಾಡುವ ಬದಲು, ರಾಷ್ಟ್ರಪತಿಗಳು ತಮ್ಮ ಪಾದಗಳನ್ನು ತೊಳೆಯುವ ಮೂಲಕ ಸಾಂಪ್ರದಾಯಿಕ ಶುದ್ಧೀಕರಣ ಆಚರಣೆಯನ್ನು ಮಾಡಿದ್ದಾರೆ. ಬಳಿಕ ಗಣಪತಿ ದೇವಸ್ಥಾನದಲ್ಲಿ ಸಂಪ್ರದಾಯಿಕವಾಗಿ ಇರುಮುಡಿಯನ್ನು ಕಟ್ಟಿಕೊಂಡು ವಿಶೇಷ ವಾಹನದಲ್ಲಿ ಶಬರಿಮಲೆಗೆ ತೆರಳಿದ್ದಾರೆ.
ಶಬರಿಮಲೆಯಲ್ಲಿ 18 ಮೆಟ್ಟಿಲುಗಳನ್ನು ಏರಿ ರಾಷ್ಟ್ರಪತಿ ಅವರು ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಈ ವೇಳೆ ರಾಷ್ಟ್ರಪತಿಯವರ ಅಂಗರಕ್ಷಕರು ಕೂಡ ಇರುಮುಡಿಕಟ್ಟಿದ್ದರು. ದೇವರ ದರ್ಶನ ಬಳಿಕ ಶಬರಿಮಲೆಯಲ್ಲಿ ದೇವಸ್ವಂ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನದ ನಂತರ ಪಂಪೆಗೆ ಹಿಂದಿರುಗಲಿದ್ದಾರೆ.
ಕಾಮೆಂಟ್ ಬಿಡಿ