ಕ್ರೈಂ

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆಯಲ್ಲಿ ರಾಶಿ ರಾಶಿ ಮೂಳೆ ಪತ್ತೆ, ವ್ಯಾಪಕ ಶೋಧಕ್ಕೆ ಮುಂದಾದ ಎಸ್‌ಐಟಿ

ಬೆಳ್ತಂಗಡಿ : ಧರ್ಮಸ್ಥಳ ಶವಹೂತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಇಂದು ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ಒಂಭತ್ತು ಸ್ಥಳಗಳಲ್ಲಿ ಮಾನವನ ಮೂಳೆಗಳ ಅವಶೇಷಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಎರಡು ದಿನಗಳ ಹಿಂದಷ್ಟೇ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿಗೆ ಬಂದು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಇದೀಗ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಒಂಬತ್ತು ಸ್ಥಳಗಳಲ್ಲಿ ಮಾನವನ ಅವಶೇಷಗಳು ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ಮಹಜರು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಾಕ್ಷಿ ದೂರುದಾರ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು. ಆ ತಲೆಬುರುಡೆ ಇದ್ದ ಆ ಜಾಗವನ್ನು ತೋರಿಸಿದ್ದ ಧರ್ಮಸ್ಥಳ ಗ್ರಾಮದ ಪಾಂಗಾಳ ವಿಠಲ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿರುವ ಈ ಕಾಡಿನ ಒಳಗೆ ಈಚೆಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ನೆಲದ ಮೇಲೆಯೇ ಮೃತದೇಹಗಳ ಅವಶೇಷ ಸಿಕ್ಕಿವೆ ಎನ್ನಲಾಗಿತ್ತು.

ಆ ಜಾಗದಲ್ಲಿ ಬುರುಡೆ ಸಿಕ್ಕಿದ್ದ ಸ್ಥಳದ ಮಹಜರಿಗೆ ತೆರಳಿದ್ದಾಗ ಕಾಡಿನಲ್ಲಿ ಒಂದು ಕಡೆ ಮೂರು ಮೃತದೇಹಗಳ ಹಾಗೂ ಇನ್ನೊಂದು ಕಡೆ ಎಂಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಕಾಣಿಸಿದ್ದವು. ಮಹಜರಿನ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳೂ ಅವುಗಳನ್ನು ನೋಡಿದ್ದಾರೆ’ ಎಂದು ವಿಠಲ ಗೌಡ ಅವರು ವಿಡಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಕಾಮೆಂಟ್ ಬಿಡಿ

Join Us