ಉಡುಪಿ – ತೆಲಂಗಾಣ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದ ಸ್ಥಳೀಯ ಚಾಲಕ ಸುಪ್ರೀತ್ ಪೊಲೀಸರ ವಶಕ್ಕೆ
ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ರಸ್ತೆಯಲ್ಲಿ ವಾಹನ ಸೈಡ್ ಕೊಡುವ ವಿಚಾರವಾಗಿ ತೆಲಂಗಾಣ ಮೂಲದ ಪ್ರವಾಸಿಗರ ಮೇಲೆ ಕೋಲಿನಿಂದ ಭೀಕರ ಹಲ್ಲೆ ನಡೆಸಿದ್ದ ಸ್ಥಳೀಯ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ (40) ಬಂಧಿತ ಆರೋಪಿಯಾಗಿದ್ದಾನೆ.
ಪೊಲೀಸ್ ದೂರಿನ ವಿವರಗಳ ಪ್ರಕಾರ, ಜೂನ್ 9ರಂದು ಸಂಜೆ 7:50ರ ಸುಮಾರಿಗೆ ಹೈದರಾಬಾದ್ ಮೂಲದ ರಂಗರಾವ್ ಎಂಬವರು ತಮ್ಮ ಕುಟುಂಬದೊಂದಿಗೆ ಕೃಷ್ಣ ಮಠದ ದರ್ಶನ ಮುಗಿಸಿ ಪಾರ್ಕಿಂಗ್ ಸ್ಥಳದಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಸುಪ್ರೀತ್, ರಸ್ತೆ ದಾಟುತ್ತಿದ್ದ ಪ್ರವಾಸಿಗರ ಮೇಲೆಯೇ ಕಾರು ಹಾಯಿಸಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ರಂಗರಾವ್ ಕಾರನ್ನು ನಿಧಾನವಾಗಿ ಚಲಾಯಿಸುವಂತೆ ಹೇಳಿದಾಗ, ಚಾಲಕ ಸುಪ್ರೀತ್ ತೀವ್ರ ರೊಚ್ಚಿಗೆದ್ದಿದ್ದಾನೆ. “ನಾನು ಇಲ್ಲಿಯ ಸ್ಥಳೀಯ ವ್ಯಕ್ತಿ, ನನ್ನ ಕಾರಿಗೆ ಯಾವುದೇ ಹಾರ್ನ್ ಮತ್ತು ಬ್ರೇಕ್ ಇಲ್ಲ, ನಾನು ಹೀಗೆಯೇ ಗಾಡಿ ಓಡಿಸುವುದು” ಎಂದು ಅಹಂಕಾರದಿಂದ ಕೂಗಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ಕಾರಿನಲ್ಲಿದ್ದ ಕೋಲನ್ನು ತಂದು ರಂಗರಾವ್ ಹಾಗೂ ಅವರ ಕುಟುಂಬದವರ ಮೇಲೆ ಭೀಕರ ಹಲ್ಲೆ ನಡೆಸಿದ್ದಾನೆ.

ಇದೇ ವೇಳೆ ಬಂಧಿತ ಆರೋಪಿ ಸುಪ್ರೀತ್ ಕೂಡ ಪ್ರವಾಸಿಗರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾನೆ. “ನಾನು ನನ್ನ ಪತ್ನಿ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಕಲ್ಸಂಕ-ರಾಜಾಂಗಣ ಮಾರ್ಗವಾಗಿ ಹೋಗುತ್ತಿದ್ದಾಗ, ತೆಲಂಗಾಣ ಮೂಲದ ಕಾರು ನನ್ನ ವಾಹನಕ್ಕೆ ಢಿಕ್ಕಿ ಹೊಡೆಯಲು ಬಂದಿತು. ಇದನ್ನು ನಾನು ಪ್ರಶ್ನಿಸಿದಾಗ ಕಾರಿನಲ್ಲಿದ್ದ ಪ್ರವಾಸಿಗರು ಕೆಳಗಿಳಿದು ಅಲ್ಲೇ ಇದ್ದ ಫೋಟೋ ಸ್ಟಾಂಡ್ ಮತ್ತು ಕುರ್ಚಿಗಳಿಂದ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಪತ್ನಿಯ ಮೇಲೂ ಕೈ ಮಾಡಿದ್ದಲ್ಲದೆ, ಕಾರಿನ ಕನ್ನಡಿಯನ್ನು ಒಡೆದು ಹಾಕಿದ್ದಾರೆ” ಎಂದು ಸುಪ್ರೀತ್ ದೂರಿನಲ್ಲಿ ತಿಳಿಸಿದ್ದಾನೆ.
ಸದ್ಯ ಪರಸ್ಪರ ದೂರು-ಪ್ರತಿದೂರುಗಳ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆಯ ಸಂಪೂರ್ಣ ತನಿಖೆ ಕೈಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಸ್ಥಳೀಯ ಚಾಲಕ ಸುಪ್ರೀತ್‌ನನ್ನು ಅರೆಸ್ಟ್ ಮಾಡಿದ್ದಾರೆ.
ಕಾಮೆಂಟ್ ಬಿಡಿ