ಮಹಿಳೆಯರಿಗೆ ಅಗೌರವ ತೋರಿಸುವುದೇ ಬಿಜೆಪಿಯವರ ಸಂಸ್ಕೃತಿಯಾ; ಸೌಮ್ಯ ರೆಡ್ಡಿ
ಮಂಗಳೂರು: ಬಿಜೆಪಿ ಪಕ್ಷಕ್ಕೆ ಮಹಿಳೆಯರ ಮೇಲೆ ಗೌರವ, ಅಭಿಮಾನ ಇದ್ದರೆ ಈ ಕೂಡಲೇ ಎಂಎಲ್‌ಸಿ ರವಿ ಕುಮಾರ್ ಅವರನ್ನು ಪಕ್ಷದಿಂದ, ಶಾಸಕ ಸ್ಥಾನದಿಂದ, ಕಾರ್ಯಕರ್ತ ಸ್ಥಾನದಿಂದ ಕಿತ್ತು ಹಾಕಬೇಕು ಹಾಗೂ ರವಿ ಕುಮಾರ್ ರಾಜಿನಾಮೆ ನೀಡಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಒತ್ತಾಯಿಸಿದರು.
ಅವರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್, ಪ್ರದೇಶ್ ಕಾಂಗ್ರೆಸ್ ವತಿಯಿಂದ ಎಂಎಲ್‌ಸಿ ರವಿ ಕುಮಾರ್ ಅವರ ಹೇಳಿಕೆಯ ವಿರುದ್ಧ ನಡೆದಿದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದು, ರವಿ ಕುಮಾರ್ ರಾಜಿನಾಮೆ ನೀಡದಿದ್ದಲ್ಲಿ ರಾಜ್ಯದಾಧ್ಯಂತ, ದೇಶದೆಲ್ಲೆಡೆ ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಧರ್ಮ, ಮಹಿಳೆಯರ ಬಗ್ಗೆ ಇತರರಿಗೆ ಪಾಠ ಹೇಳಿಕೊಡುವ ರೀತಿಯಲ್ಲಿ ಬಿಜೆಪಿಗರು ಮಾತನಾಡುತ್ತಾರೆ. ಆದರೆ ಇಂದು ಅವರದೇ ಪಕ್ಷದ ನಾಯಕನೋರ್ವ ಓರ್ವ ಹೆಣ್ಣು ಮಗಳು ಕಷ್ಟ ಪಟ್ಟು ಕಲಿತು, ಐಎಎಸ್ ಪರೀಕ್ಷ ಪಾಸ್ ಮಾಡಿ, ಈಗ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೇಶ್ ಅವರ ಬಗ್ಗೆ ಎಂಎಲ್‌ಸಿ ರವಿ ಕುಮಾರ್ ಅವಹೇಳನವಾಗಿ ಮಾತನಾಡಿರುವುದು ಬಿಜೆಪಿಗರಿಗೆ ನಾಚಿಗೆಯಾಗಬೇಕು ಎಂದು ಲೇವಡಿ ಮಾಡಿದರು.
ರವಿಕುಮಾರ್ ಮಾತಿನಿಂದ ಆತನ ಮನಸ್ಸಿನಲ್ಲಿ ಮಹಿಳೆಯರ ಮೇಲೆ ಗೌರವ ಇಲ್ಲದಿರುವುದು ಗೊತ್ತಾಗುತ್ತದೆ. ಈ ಹಿಂದೆ ಕಲಬುರ್ಗಿಯ ಜಿಲ್ಲಾಧಿಕಾರಿ ಫೌಝಿಯಾ ಅವರ ಬಗ್ಗೆ ಸಿಟಿ ರವಿ ಮಾತನಾಡಿ, ಕ್ಷಮೆ ಕೇಳಿದ್ದಾರೆ. ಮಹಿಳೆಯ ಬಗ್ಗೆ ಹೀಗೆ ಕೀಳಾಗಿ ಮಾತನಾಡುವುದರಿಂದ ದೇಶ ಅಭಿವೃದ್ಧಿಯಿಂದ ಮತ್ತಷ್ಟು ಹಿಂದೆ ಹೋಗುತ್ತಿದೆ ಎಂದರು.
ಪ್ರತಿಭಟನೆಯ ಬಳಿಕ ಎಸ್ಪಿ ಅವರನ್ನು ಭೇಟಿ ಮಾಡಿ ದೂರು ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮಾಜಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ರವಿ ಕುಮಾರ್ ಮಾತನಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆ ಕಲಬುರ್ಗಿಯ ಜಿಲ್ಲಾಧಿಕಾರಿಯ ವಿರುದ್ಧ ಮಾತನಾಡಿ ಹೈಕೋರ್ಟ್‌ನಿಂದ ಛೀ ಮಾರೆ ಹಾಕಿಸಿಕೊಂಡರೂ ಇನ್ನೂ ಬುದ್ದಿ ಬಂದಿಲ್ಲ.
ಕಾಮೆಂಟ್ ಬಿಡಿ