ಮಂಗಳೂರು:ವೈರಲ್ ಸುದ್ದಿಯ ಸತ್ಯಾಸತ್ಯತೆ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ. ಬಿಜೆಪಿ ಐಟಿ ಸೆಲ್ಲಿನ ಪ್ರೊಪಾಗೆಂಡದ ಬಗ್ಗೆ ಅರಿವಿರುವ ನಾವು ಇದರ ಬಗ್ಗೆ ಗೇಲಿ ಮಾಡಬಹುದು. ಆದರೆ ಇಂಥ ಫೇಕ್ ಪೋಸ್ಟ್ ಗಳು ಸಾಮಾನ್ಯ ಮತದಾರರ ಮೇಲೆ ಮಾಡುವ ಪರಿಣಾಮ ಬಹಳ ದೊಡ್ಡದು. ಅಂತರಾಷ್ಟ್ರೀಯ ಒಪ್ಪಂದಗಳು, ಮಾರುಕಟ್ಟೆ, ಹಣಕಾಸು ವ್ಯವಸ್ಥೆ, ವಿನಿಮಯ ದರ, ಡಾಲರ್ ಎಕಾನಮಿ ಮುಂತಾದವುಗಳ ಬಗ್ಗೆ ಅರಿವಿರದ, ಅದರ ಅಗತ್ಯನೂ ಇರದ, ತಮ್ಮ ವಿದ್ಯಾಭ್ಯಾಸ, ಉದ್ಯೋಗವನ್ನು ನಿಯತ್ತಿನಿಂದ ಮಾಡಿಕೊಂಡು, ತಮ್ಮ ದೈನಂದಿನ ಸಾಮಾನ್ಯ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ಸಾಮಾನ್ಯ ಜನರ ಮೇಲೆ ಇಂಥ ಪೋಸ್ಟ್ ಗಳು ಮಾಡುವ ಪರಿಣಾಮಗಳು ಬಹಳ ಹೆಚ್ಚು. ಈಗಾಗಲೇ ಮುಸ್ಲೀಮ್ ದ್ವೇಷದಿಂದ ಹೊತ್ತಿ ಉರಿಯುತ್ತಿರುವ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಮೇಲಂತೂ ಇದು ಬಹಳ ಪರಿಣಾಮವನ್ನು ಹಾಕುತ್ತದೆ. ಹಾಗಾಗಿಯೇ ಇಂಥದವುಗಳನ್ನು ಕೌಂಟರ್ ಮಾಡಬೇಕು, ನಮ್ಮ ನಮ್ಮ ಚೌಕಟ್ಟಿನಲ್ಲಿ.

ಉಕ್ರೇನ್-ರಷ್ಯಾ ಯುದ್ದ ಆರಂಭವಾದ ನಂತರದಿಂದ ಭಾರತ ರಷ್ಯಾದಿಂದ ಹಿಂದೆಂದಿಗಿಂತಲೂ ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಾರಣ? ಉಕ್ರೇನ್ ಮೇಲೆ ಅನಗತ್ಯವಾಗಿ ಯುದ್ಧ ಸಾರಿರುವ ರಷ್ಯಾದ ಮೇಲೆ ಅಮೇರಿಕಾ, ಆಸ್ಟ್ರೇಲಿಯಾ ಹಾಗು ಯುರೋಪಿನ ಬಹುತೇಕ ದೇಶಗಳು ಆರ್ಥಿಕ ಹಾಗೂ ಇತರ ದಿಗ್ಬಂಧನ ಹೇರಿವೆ. ಹಾಗಾಗಿ ಈ ದೇಶಗಳು ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಯುರೋಪಿನ ಬಹುತೇಕ ದೇಶಗಳಿಗೆ ರಷ್ಯಾ ಪೈಪ್‍ಲೈನ್ ಮೂಲಕ ಕಚ್ಚಾತೈಲವನ್ನು ಪೂರೈಸುತಿತ್ತು. ಆದರೆ ಯುರೋಪಿನ ಬಹುತೇಕ ದೇಶಗಳು ಈ ಪೈಪ್‍ಲೈನ್‍ಗಳನ್ನು ಮುಚ್ಚಿ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಿವೆ. ಇದರಿಂದಾಗಿ ರಷ್ಯಾ ತೊಂದರೆಯಲ್ಲಿದೆ. ಏಷಿಯಾದ ದೇಶಗಳಾದ ಜಪಾನ್ ಹಾಗೂ ದಕ್ಷಿಣ ಕೊರಿಯಾ ಕೂಡಾ ರಷ್ಯಾದಿಂದ ಆಮದಾಗುತ್ತಿದ ಕಚ್ಚಾತೈಲದ ಪ್ರಮಾಣವನ್ನು ಕಡಿಮೆಗೊಳಿಸಿದೆ.
ಹಾಗಾಗಿ ರಷ್ಯಾ ಕಳೆದ ಎರಡ್ಮೂರು ತಿಂಗಳುಗಳಿಂದ ಅತೀ ಅಗ್ಗದ ದರದಲ್ಲಿ ಕಚ್ಚಾತೈಲವನ್ನು ಮಾರುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಚಾತೈಲದ ಬೆಲೆ US $80-90 ಇದ್ದರೆ, ರಷ್ಯಾ ಸದ್ಯಕ್ಕೆ ತನ್ನ ಕಚ್ಚಾತೈಲವನ್ನು US $ 45-40 ಪ್ರತೀ ಬ್ಯಾರಲ್‍ನಂತೆ ಮಾರುತ್ತಿದೆ. ಈ ಅಗ್ಗದ ತೈಲದ ಲಾಭ ಪಡೆಯಲು ಮುಂದಾಗಿರುವ ಚೀನಾ ಹಾಗೂ ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಕಳೆದ ಮೂರು ತಿಂಗಳುಗಳಿಂದ ಹೆಚ್ಚಿಸಿದೆ.
ಚೀನಾದ ವಿಷಯ ಗೊತ್ತಿಲ್ಲ. ಆದರೆ ಭಾರತ ಮಾತ್ರ ಭಾರೀ ಅಗ್ಗದ ಬೆಲೆಯಲ್ಲಿ ಖರೀದಿಸಿರುವ ರಷ್ಯಾದ ಕಚ್ಚಾ ತೈಲದ ಲಾಭವನ್ನು ಜನರಿಗೆ ಕೊಡುತ್ತಿಲ್ಲ. ಅಂದಹಾಗೆ ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ಕಚ್ಚಾತೈಲ ಆಮದಾದರೂ, ಭಾರತದ ಅಗತ್ಯದ 60% ಕಚ್ಚಾತೈಲವನ್ನು ಪೂರೈಸುವುದು ಗಲ್ಫ್ ರಾಷ್ಟ್ರಗಳೇ. ಐಟಿ ಸೆಲ್, ಪೋಸ್ಟ್ ಕಾರ್ಡ್ ಬಚ್ಚಾ ಹಾಗೂ ಲುಚ್ಚಾಗಳು ಏನೇ ಪೋಸ್ಟರ್ ಹಾಕಲಿ, ಗಲ್ಫ್ ಮೇಲಿನ ತೈಲದ ಅವಲಂಬನೆಯನ್ನು ಭಾರತ ಕಡಿಮೆ ಮಾಡಲು ಸದ್ಯಕ್ಕಂತೂ ಚಾನ್ಸೇ ಇಲ್ಲ.
ಅಂದಹಾಗೆ ರಷ್ಯಾದಿಂದ ಅರ್ಧ ಬೆಲೆಗೆ ಕಚ್ಚಾ ತೈಲ ಬಂದರೂ ನಮ್ಮಲ್ಲಿ ಪೆಟ್ರೋಲ್ ಬೆಲೆ ಇನ್ನೂ ನೂರರ ಮೇಲಿದೆಯಲ್ವಾ, ಯಾಕೆ? ಯಾಕೆಂದರೆ ರಷ್ಯಾದಿಂದ ಬಂದ ಅಗ್ಗದ ಕಚ್ಚಾ ತೈಲ ಗುಜರಾತಿನ ರಿಲಾಯನ್ಸ್, ನಯಾರಾ ಎನರ್ಜಿ ಮುಂತಾದ ಖಾಸಗಿ ರಿಫಾಯ್ನರಿಗಳು ಸಂಸ್ಕರಿಸಿ, ಯುರೋಪ್ ಹಾಗೂ ಆಸ್ಟ್ರೇಲಿಯಾಕ್ಕೆ ಹೆಚ್ಚಿನ ಬೆಲೆಗೆ ಮಾರುತ್ತಿವೆ. ಇದರ ಜೊತೆಗೆ ಭಾರತದ ಸರಕಾರಿ ರಿಫಾಯ್ನರಿಗಳೂ ರಷ್ಯಾದಿಂದ ಅಗ್ಗದ ಕಚ್ಚಾ ತೈಲವನ್ನು ತರಿಸುತ್ತಿವೆಯಾದರೂ, ಗ್ರಾಹಕರಿಗೆ ಅದರ ಲಾಭವನ್ನು ತಲುಪಿಸುತ್ತಿಲ್ಲ. ಬದಲಾಗಿ ಸರ್ಕಾರಿ ಸಂಸ್ಕೃರಣಾಗಾರಗಳೂ ರಷ್ಯಾದ ಕಚ್ಚಾತೈಲವನ್ನು ಸಂಸ್ಕರಿಸಿ ವಿದೇಶಗಳಿಗೆ ಡಿಸೇಲ್, ಪೆಟ್ರೋಲ್ ಮಾರುತ್ತಾ ಲಾಭ ಮಾಡಿಕೊಳ್ಳುತ್ತಿವೆ.

ಹಾಗಾಗಿ ಇಂಥ ಫೇಕ್ ಪೋಸ್ಟರ್ ಗಳನ್ನು ಹುಟ್ಟು ಹಾಕುವವವರಿಗೂ, ಅದನ್ನು ಶೇರ್ ಮಾಡುವವರಿಗೂ ಆರ್ಥಿಕತೆ, ಅಂತರಾಷ್ಟ್ರೀಯ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿರುವುದಿಲ್ಲ. ಒಂದ್ವೇಳೆ ಭಾರತ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಕಡಿಮೆಗೊಳಿಸಿದರೆ, ಮಧ್ಯಪ್ರಾಚ್ಯದ ದೇಶಗಳೇನೂ ಮುಳುಗಿ ಹೋಗುವುದಿಲ್ಲ. ರಷ್ಯಾದ ತೈಲದ ಆಮದನ್ನು ನಿಲ್ಲಿಸಿರುವ ಯುರೋಪ್ ಇದೀಗ ಮಧ್ಯಪ್ರಾಚ್ಯದ ದೇಶಗಳಿಂದ ತೈಲ ಆಮದಿಗೆ ಮುಂದಾಗಿದೆ. ಹಾಗಾಗಿ ಈ ಪೋಸ್ಟರ್ ಗಳ ಕಲರ್ ಮಾತ್ರ ಚೆಂದವೇ ಹೊರತು ಆದರ ವಾಸ್ತವ ಅಲ್ಲ. ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಪೋಸ್ಟರ್ ನ ಸತ್ಯಾಸತ್ಯತೆ ಹಂಚಿಕೊಂಡದೆ. ಬಿಜೆಪಿ ಫೇಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- ಪೊಲಿಟಿಕಲ್ ಬ್ಯೂರೋ true news ಕನ್ನಡ