ತಿರುವಾಂಕೂರು: ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನದ ಲೇಪಿತ ಛಾವಣಿ ಸೋರುತ್ತಿರುವುದು ಕಂಡು ಬಂದಿದ್ದು, ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಸೋರುತ್ತಿರುವುದು ಕಂಡು ಬಂದಿದೆ. ಜುಲೈ 16 ರಂದು ದೇವಸ್ಥಾನವು ಮಾಸಿಕ ಪೂಜೆಗಾಗಿ ತೆರೆದಾಗ ದ್ವಾರಪಾಲಕನ ವಿಗ್ರಹದ ಮೇಲೆ ನೀರು ಜಿನುಗುತ್ತಿರುವುದು ಕಂಡುಬಂದಿದೆ. ಆಗಸ್ಟ್ 3 ರಂದು ದೇವಾಲಯದ ವಾಸ್ತುಶಾಸ್ತ್ರದ ತಜ್ಞರ ತಂಡವು ಮೇಲ್ಛಾವಣಿಯನ್ನು ಪರಿಶೀಲಿಸುತ್ತದೆ ಮತ್ತು ಅವರ ಸಲಹೆಯ ಮೇರೆಗೆ ದುರಸ್ತಿ ಕಾರ್ಯಗಳನ್ನು ನಡೆಸಲಾಗುವುದು. ದುರಸ್ತಿ ಕಾರ್ಯದ ವೆಚ್ಚವನ್ನು ಟಿಡಿಬಿ ಭರಿಸಲಿದ್ದು, ಕೆಲವು ಭಕ್ತರು ಚಿನ್ನವನ್ನು ದುರಸ್ತಿಗೆ ನೀಡಲು ಮುಂದೆ ಬಂದರೆ ನಾವು ಸ್ವೀಕರಿಸುತ್ತೇವೆ ಎಂದು ಟಿಡಿಬಿ ಅಧ್ಯಕ್ಷ ಕೆ.ಅನಂತಗೋಪನ್ ಹೇಳಿದರು.
ಉದ್ಯಮಿ ವಿಜಯ್ ಮಲ್ಯ ಅವರು 1998 ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿಯ ಚಿನ್ನದ ಲೇಪನವನ್ನು ಪ್ರಾಯೋಜಿಸಿದ್ದರು. ಅವರು ಇದಕ್ಕಾಗಿ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರವನ್ನು ದಾನ ನೀಡಿದ್ದರು. ಇದಕ್ಕಾಗಿ 18 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವರದಿಯಾಗಿದೆ.