ಸುಬ್ರಹ್ಮಣ್ಯ;ಸುಬ್ರಹ್ಮಣ್ಯ ಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿ ಹಣ ಕೊಡುವಂತೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಕುಟ್ರುಪಾಡಿ ಗ್ರಾಮದ ಬೀಮಗುಂಡಿ ನಿವಾಸಿ ಶಶಿಕಿರಣ್ ಎಂಬವರು ಪೋಲಿಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವವರು. ಈ ಬಗ್ಗೆ ಹೇಳಿಕೆ ನೀಡಿರುವ ಶಶಿಕಿರಣ್ ಅವರು ಚಂಪಾಷಷ್ಠಿಯಂದು ನಾನು ಜ್ಯೂಸ್ ಮತ್ತು ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು, ಪಂಚಮಿಯ ರಾತ್ರಿ 12 ಗಂಟೆ ಸುಮಾರಿಗೆ ಸ್ಟಾಲಿಗೆ ಬಂದ ಪೋಲಿಸ್ ಸಿಬ್ಬಂದಿ ಬೀಮಣ್ಣ ಗೌಡ ಎಂಬವರು 5 ಸಾವಿರ ಹಣ ನೀಡುವಂತೆ ಒತ್ತಾಯಿಸಿದ್ದು, ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗೆ ನಾನು ಹೆದರಿ 1000 ನೀಡಿದ್ದೇನೆ.

ಈ ಹಣ ಸಾಕಾಗುವುದಿಲ್ಲ, 5000 ನೀಡುವಂತೆ ಪೋಲಿಸ್ ಸಿಬ್ಬಂದಿ ಬೆದರಿಸಿದ್ದು ಅಷ್ಟು ಹಣ ನೀಡದಿದ್ದಾಗ ನನ್ನನ್ನು ಠಾಣೆಯ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ, ಅಲ್ಲದೆ ನಾನು ವ್ಯಾಪಾರಕ್ಕೆ ಇಟ್ಟಿದ್ದ ಸಾಮಾಗ್ರಿಗಳನ್ನು ಇತರ ವ್ಯಕ್ತಿಗಳಿಂದ ಹಾಗೂ ನನ್ನ ತಲೆಯಲ್ಲಿ ಹೊರಿಸಿ ಪೋಲಿಸ್ ವಸತಿಗೃಹಕ್ಕೆ ಕಳಿಸಿದ್ದಾರೆ, ವಸತಿ ಗೃಹದಲ್ಲಿ ನನ್ನನ್ನು ಕುಳ್ಳಿರಿಸಿ ನನ್ನ ತಲೆ ಮೇಲೆ 25ರಿಂದ 30 ಕಿಲೋ ತೂಕದ ನನ್ನ ಅಂಗಡಿಯ ಸಾಮಾಗ್ರಿಯನ್ನು ತಲೆ ಮೇಲೆ ಇಟ್ಟು ಸುಮಾರು 1 ಗಂಟೆಯ ಕಾಲ ಕುಳ್ಳಿರಿಸಿದ್ದಾರೆ, ಬಳಿಕ ನನಗೆ ಬೂಟು ಕಾಲಿನಿಂದ ಒದೆದಿದ್ದಾರೆ ಇದರಿಂದ ನಾನು ಅಸ್ವಸ್ಥಗೊಂಡಿದ್ದೇನೆ ನನಗೆ ನ್ಯಾಯ ಬೇಕು ಎಂದು ಆಸ್ಪತ್ರೆಗೆ ದಾಖಲಾಗಿರುವ ಯುವಕ ಹೇಳಿಕೆ ನೀಡಿದ್ದಾರೆ.ಈ ಬಗ್ಗೆ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದು, ತನಿಖೆ ನಂತರ ಸತ್ಯಾಂಶ ಹೊರ ಬರಬೇಕಿದೆ.