ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಸದ್ಯ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಂಡಲ ಹಾಗೂ ಮಕರಜ್ಯೋತಿ ಪೂಜೆಗಾಗಿ ನ.16ರಿಂದ ಅಯ್ಯಪ್ಪಸ್ವಾಮಿಯ ದರ್ಶನ ಆರಂಭವಾಗುತ್ತಿದ್ದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭರ್ಜರಿ ಆದಾಯ ಬಂದಿದೆ. ಕಳೆದ ಹತ್ತು ದಿನಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಆದಾಯ ಬಂದಿದ್ದು, ರೂ. 52.55 ಕೋಟಿ ಸಂಗ್ರಹವಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ. ಕಳೆದ ವರ್ಷ ಇದೇ ವೇಳೆಗೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ರೂ. 9.92 ಕೋಟಿ ಆದಾಯ ಬಂದಿತ್ತು.

10 ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಅತಿ ಹೆಚ್ಚು ಅರವಣ ಪ್ರಸಾದ ಮಾರಾಟವಾಗಿದ್ದು ರೂ. 23.57 ಕೋಟಿ ಸಂಗ್ರಹವಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ. ಹುಂಡಿಗಳ ಮೂಲಕ ರೂ. 12.73 ಕೋಟಿ, ಅಪ್ಪಂ ಪ್ರಸಾದ ಮಾರಾಟದ ಮೂಲಕ ರೂ. 2.58 ಕೋಟಿ ಕಲೆಯಾಗಿದೆ ಎಂದು ಬಹಿರಂಗಪಡಿಸಿದರು. ಮುಂದಿನ 20 ದಿನಗಳಲ್ಲಿ ಭಾರಿ ಆದಾಯ ಬರುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಮುಂದಿನ 20 ದಿನಗಳಿಗಾಗಿ 51 ಲಕ್ಷ ಅರವಣ ಪ್ರಸಾದ ಬಾಕ್ಸ್ಗಳನ್ನು ಸಿದ್ಧಪಡಿಸಲಾಗಿದೆ. ದಿನಕ್ಕೆ ಸರಾಸರಿ ಎರಡೂವರೆ ಲಕ್ಷ ಬಾಕ್ಸ್ ಪ್ರಸಾದ ಮಾರಾಟವಾಗುತ್ತದೆ ಎಂದರು.

'ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಅಪಾರ ಆದಾಯ ಬಂದಿದೆ. ಆದಾಯದ ಮುಕ್ಕಾಲು ಪಾಲು ಉತ್ಸವದ ಆಯೋಜನೆಗೆ ಬಳಸಲಾಗುವುದು. ಅವಧಿಯ ಆರಂಭದಿಂದಲೂ ಅಯ್ಯಪ್ಪ ಮಾಲಾಧಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಆನ್ಲೈನ್ ಮತ್ತು ಸ್ಪಾಟ್ ಬುಕಿಂಗ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಸನ್ನಿಧಾನಕ್ಕೆ ಹೋಗಲು ನಾಲ್ಕು ದ್ವಾರಗಳನ್ನು ತೆರೆಯಲಾಗಿದೆ. ಸನ್ನಿಧಾನಂ, ಪಂಪಾ ಮತ್ತು ನಿಲಕ್ಕಲ್ನಲ್ಲಿ ನಾವು ದಿನಕ್ಕೆ ಮೂರು ಬಾರಿ ಅಡೆತಡೆಯಿಲ್ಲದೆ ಆಹಾರವನ್ನು ನೀಡುತ್ತೇವೆ. ಅಗತ್ಯವಿರುವ ಭಕ್ತರಿಗೆ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ವೈದ್ಯಕೀಯ ನೆರವು ನೀಡುತ್ತಿದ್ದೇವೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಪರಿಣಾಮ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಆದಾಯ ಕಡಿಮೆಯಾಗಿತ್ತು. ಈ ವರ್ಷ ಕೊರೊನಾ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಲ್ಲಿ ದೇವಸ್ಥಾನದ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದ್ದರು. ಯಾವುದೇ ತೊಂದರೆಯಿಲ್ಲದೆ ಮುಂಗಡವಾಗಿ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.