ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್‌ನ 47 ನೇ ಸಭೆಯ ನಂತರ ನಿರ್ಧರಿಸಲಾಗಿರುವ ಹೊಸ ಸರಕು ಮತ್ತು ಸೇವಾ ತೆರಿಗೆ (GST) ದರಗಳು ಸೋಮವಾರದಿಂದ ಜಾರಿಗೆ ಬಂದಿವೆ. ಇನ್ನು ಮುಂದೆ ಜನರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಹೆಚ್ಚಿನ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.
ದಿನನಿತ್ಯದ ಅಗತ್ಯ ವಸ್ತುಗಳ ಮೇಲೂ ಜಿಎಸ್‌ಟಿ ಪಾವತಿಸಬೇಕಾಗಿದ್ದು, ಇದರಿಂದಾಗಿ ಬೆಲೆಗಳು ಏರಿಕೆಯಾಗಲಿದೆ. ಇಂದಿನಿಂದ ಜಾರಿಗೆ ಬರಲಿರುವ ಹೊಸ ಜಿಎಸ್‌ಟಿ ದರಗಳೊಂದಿಗೆ ಹೋಟೆಲ್ ರೂಂಗಳು ಮತ್ತು ಬ್ಯಾಂಕ್ ಸೇವೆಗಳು ದುಬಾರಿಯಾಗಲಿದ್ದು, ಎಲೆಕ್ಟ್ರಾನಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು 5%ರಷ್ಟು ಕಡಿತಗೊಳಿಸಲಾಗಿದೆ.
ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರ್ಮನ್ ನೇತೃತ್ವದ GST ಕೌನ್ಸಿಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹಲವಾರು ಸರಕು ಮತ್ತು ಸೇವೆಗಳಿಗೆ ಹೊಸ ತೆರಿಗೆಗಳು ಜಾರಿಗೆ ಬಂದಿವೆ. ಯಾವುದು ದುಬಾರಿ ಮತ್ತು ಅಗ್ಗವಾಗಿದೆ ಎಂಬುದನ್ನು ಕೆಳಗೆ ಪರಿಶೀಲಿಸಿ:
ಇಂದಿನಿಂದ ಯಾವುದು ದುಬಾರಿಯಾಗಲಿದೆ?
- ಗೋಧಿ ಹಿಟ್ಟು, ಪನೀರ್ ಮತ್ತು ಮೊಸರು ಸೇರಿದಂತೆ ಪ್ಯಾಕ್ ಮಾಡಿ ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ 5% ಜಿಎಸ್‌ಟಿ ಅನ್ವಯ. ಈ ಹಿಂದೆ ಅದಕ್ಕೆ ಜಿಎಸ್‌ಟಿ ಇರಲಿಲ್ಲ.
- 5,000 ಕ್ಕಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳ ಮೇಲೆ 5% GST ಅನ್ವಯಿಸುತ್ತದೆ.
- ಟೆಟ್ರಾ ಪ್ಯಾಕ್ ಮಾಡಲಾಗಿರುವ ಆಹಾರಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗುತ್ತದೆ.
- ಅಟ್ಲಾಸ್‌ಗಳನ್ನು ಒಳಗೊಂಡಂತೆ ನಕ್ಷೆಗಳು ಮತ್ತು ಚಾರ್ಟ್‌ಗಳ ಮೇಲೆ 12% ಜಿಎಸ್‌ಟಿ ವಿಧಿಸಲಾಗುತ್ತದೆ.
- ಚೆಕ್‌ಗಳ ವಿತರಣೆಗೆ ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೆ 18% ಜಿಎಸ್‌ಟಿ ವಿಧಿಸಲಾಗುತ್ತದೆ.
- ಪ್ರಿಂಟಿಂಗ್, ರೈಟಿಂಗ್, ಡ್ರಾಯಿಂಗ್ ಇಂಕ್‌ಗಳು ಮೇಲಿನ ಜಿಎಸ್‌ಟಿ ದರವನ್ನು 12% ದಿಂದ 18%ಕ್ಕೆ ಹೆಚ್ಚಿಸಲಾಗಿದೆ.
- ಬ್ಲೇಡ್‌ಗಳನ್ನು ಕತ್ತರಿಸುವ ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳ ಮೇಲಿನ ಜಿಎಸ್‌ಟಿ ದರವನ್ನು 12% ದಿಂದ 18%ಕ್ಕೆ ಹೆಚ್ಚಿಸಲಾಗಿದೆ.
- ಪೆನ್ಸಿಲ್ ಶಾರ್ಪನರ್‌ಗಳ ಜಿಎಸ್‌ಟಿ ದರವನ್ನು 12% ದಿಂದ 18%ಕ್ಕೆ ಹೆಚ್ಚಿಸಲಾಗಿದೆ.
- ಎಲ್‌ಇಡಿ ಬಲ್ಬ್‌ಗಳ ಜಿಎಸ್‌ಟಿ ದರವನ್ನು 12% ದಿಂದ 18%ಕ್ಕೆ ಹೆಚ್ಚಿಸಲಾಗಿದೆ.
- ಡ್ರಾಯಿಂಗ್ ಮತ್ತು ಮಾರ್ಕರ್ ಉಪಕರಣಗಳ ಮೇಲಿನ ಜಿಎಸ್‌ಟಿ ದರಗಳನ್ನು ಹಿಂದಿನ 12% ದಿಂದ 18% ಕ್ಕೆ ಹೆಚ್ಚಿಸಲಾದಿದೆ.
- ಸೋಲಾರ್ ವಾಟರ್ ಹೀಟರ್‌ಗಳ ಮೇಲಿನ ಜಿಎಸ್‌ಟಿಯನ್ನು 5% ದಿಂದ 12% ಕ್ಕೆ ಹೆಚ್ಚಿಸಲಾಗಿದೆ.
- ರಸ್ತೆಗಳು, ಸೇತುವೆಗಳು, ರೈಲ್ವೇಗಳು, ಮೆಟ್ರೋ, ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್‌ಗಳು ಮತ್ತು ಸ್ಮಶಾನಗಳ ಕೆಲಸದ ಒಪ್ಪಂದಗಳು ಸೇರಿದಂತೆ ಈ ಎಲ್ಲಾ ಸೇವೆಗಳ ಜಿಎಸ್‌ಟಿಯನ್ನು 12% ದಿಂದ 18% ಕ್ಕೆ ಹೆಚ್ಚಿಸಲಾಗಿವೆ.
ಅಗ್ಗ ಯಾವುದು?
- ರೋಪ್‌ವೇಗಳ ಮೂಲಕ ಸರಕು ಮತ್ತು ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆಗಳನ್ನು 12% ದಿಂದ 5%ಕ್ಕೆ ಕಡಿತಗೊಳಿಸಲಾಗುತ್ತದೆ.
- ಈಶಾನ್ಯ ರಾಜ್ಯಗಳು ಮತ್ತು ಬಂಗಾಳದ ಬಾಗ್ಡೋಗ್ರಾದಿಂದ ಎಕಾನಮಿ ವರ್ಗದಲ್ಲಿ ವಿಮಾನದ ಮೂಲಕ ಪ್ರಯಾಣಿಕರ ಸಾಗಣೆಗೆ ಜಿಎಸ್‌ಟಿ ವಿನಾಯಿತಿ ನೀಡಲಾಗುತ್ತದೆ.
- ಟ್ರಕ್‌ಗಳು ಮತ್ತು ಸರಕು ಸಾಗಣೆಗಳ ಬಾಡಿಗೆಗೆ (ಇಂಧನದ ವೆಚ್ಚವನ್ನು ಒಳಗೊಂಡಿರುವಲ್ಲಿ) ಜಿಎಸ್‌ಟಿಯನ್ನು 18% ದಿಂದ 12% ಕ್ಕೆ ಕಡಿತಗೊಳಿಸಲಾಗುತ್ತದೆ.
- ಎಲೆಕ್ಟ್ರಿಕ್ ವಾಹನಗಳು ಐದು ಶೇಕಡಾ ರಿಯಾಯಿತಿ ಜಿಎಸ್‌ಟಿ ದರಕ್ಕೆ ಅರ್ಹವಾಗಿರುತ್ತವೆ.