ಸ್ಟೋರೀಸ್

ಬಿರುಗಾಳಿಗೆ ಹೆದರಿ ಹಾರಿಹೋಗಿದ್ದ ಸಾಕು ಗಿಣಿ ;ಪತ್ತೆಗೆ ಖರ್ಚು ಮಾಡಿದ್ದು ಬರೋಬ್ಬರಿ 1,50,0000 ರೂಪಾಯಿ

ಉತ್ತರ ಪ್ರದೇಶ: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಬೆಕ್ಕು, ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಅವುಗಳಿಗೆ ಮಕ್ಕಳಂತೆ ಕೇರ್ ಮಾಡ್ತಾರೆ. ಒಂದು ವೇಳೆ ಕಾಣೆಯಾದರೆ ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಿದ್ದೇವೆ ಎನ್ನುವ ರೀತಿಯಲ್ಲಿ ಹುಡುಕಾಟಕ್ಕೆ ಮುಂದಾಗುತ್ತಾರೆ. ಇದೀಗ ನಾಪತ್ತೆಯಾಗಿದ್ದ ಸಾಕು ಗಿಣಿಯೊಂದು ಪತ್ತೆಯಾಗಿ ಕುಟುಂಬವೊಂದು ನಿಟ್ಟುಸಿರು ಬಿಟ್ಟ ಘಟನೆ ನಡೆದಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಕಳೆದುಹೋಗಿದ್ದ ಸಾಕು ಗಿಣಿಯೊಂದನ್ನು ಹುಡುಕಿಕೊಟ್ಟವರಿಗೆ ಬರೋಬ್ಬರಿ 50,000 ರೂಪಾಯಿ ನಗದು ಬಹುಮಾನ ನೀಡುವುದಾಗಿ ಕಟುಂಬವೊಂದು ಘೋಷಣೆ ಮಾಡಿತ್ತು. ಕೊನೆಗೂ ಈ ಭಾವನಾತ್ಮಕ ಹುಡುಕಾಟಕ್ಕೆ ಫಲ ಸಿಕ್ಕಿದ್ದು, ಆ ಕುಟುಂಬ ನಿಟ್ಟುಸಿರು ಬಿಟ್ಟಿದೆ.

ಬಿರುಗಾಳಿಗೆ ಹೆದರಿ ಹಾರಿಹೋಗಿದ್ದ ಗಿಣಿ 

ಆಗ್ರಾದ ಬೋದ್ಲಾ ಚೌರಸ್ತೆಯ ನಿವಾಸಿ ಹಾಗೂ ಆದಾಯ ತೆರಿಗೆ ವಕೀಲರಾದ ಸುನಿಲ್ ಕುಮಾರ್ ಸಿಂಗ್ ಅವರ ಕುಟುಂಬದ ಪ್ರೀತಿಯ ಸಾಕು ಗಿಣಿ 'ಮಾವು' ಜುಲೈ 13ರಂದು ಬೀಸಿದ ಬೀಸಿದ ಬಿರುಗಾಳಿಗೆ ಹೆದರಿ ಹಾರಿಹೋಗಿತ್ತು. ತಮ್ಮ ಕುಟುಂಬದ ಸದಸ್ಯನಂತಿದ್ದ ಈ ಗಿಣಿ ಕಾಣೆಯಾದ ದಿನದಿಂದ ಇಡೀ ಕುಟುಂಬದ ನೆಮ್ಮದಿ ನಾಶವಾಗಿತ್ತು. 

ಗಿಣಿ ಹುಡುಕಾಟಕ್ಕಾಗಿ ವಿಶೇಷ ಅಭಿಯಾನ

ಗಿಣಿಯನ್ನು ಪತ್ತೆ ಹಚ್ಚಲು ಸುನಿಲ್ ಸಿಂಗ್ ಅವರು ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳನ್ನು ಹಾಕಿಸಿದ್ದರು. ಅದರಲ್ಲಿ ಗಿಣಿಯ ಫೋಟೋ ಹಾಕಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಹಣ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ವಿಭಿನ್ನ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಅಭಿಯಾನದಿಂದಾಗಿ ದೇಶದ ವಿವಿಧ ರಾಜ್ಯಗಳಿಂದ ಇವರಿಗೆ ಸುಮಾರು 1,500ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದ್ದವು.

ಗಿಣಿ ಸಿಕ್ಕಿದ್ದೇ ರೋಚಕ 

ಸುಮಾರು 6 ದಿನಗಳ ನಿರಂತರ ಹುಡುಕಾಟದ ನಂತರ, ಭಾನುವಾರ ಬೆಳಗ್ಗೆ ಸುನಿಲ್ ಅವರಿಗೆ ಶಾಸ್ತ್ರಿಪುರಂ ಕೈಗಾರಿಕಾ ಪ್ರದೇಶದ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಗಿಣಿ ತನ್ನ ಬಳಿ ಇರುವುದಾಗಿ ಆತ ತಿಳಿಸಿದ್ದನು. ಸುನಿಲ್ ಅವರು ವಿಡಿಯೋ ಕಾಲ್ ಮೂಲಕ ಪರಿಶೀಲಿಸಿದಾಗ ಅದು ತಮ್ಮದೇ ಗಿಣಿ ಎಂದು ಕನ್ಫರ್ಮ್ ಮಾಡಿಕೊಂಡರು. ತಕ್ಷಣವೇ ಸುನಿಲ್ ಸಿಂಗ್ ಅವರು ನಿಗದಿಪಡಿಸಿದ ಜಾಗಕ್ಕೆ ಹೋಗಿ ಆ ವ್ಯಕ್ತಿಗೆ 50,000 ರೂಪಾಯಿ ನಗದು ಬಹುಮಾನದ ಹಣವನ್ನು ಕೊಟ್ಟು ತಮ್ಮ ನೆಚ್ಚಿನ ಗಿಣಿಯನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಾರೆ. ಕಳೆದ ವರ್ಷ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಯಲ್ಲಿ ಸಿಕ್ಕಿದ್ದ ಈ ಗಿಣಿಯನ್ನು ಸುನಿಲ್ ಅವರ ಕುಟುಂಬ ತಂದು ಪ್ರೀತಿಯಿಂದ ಸಾಕಿತ್ತು. ಅದನ್ನು ಎಂದಿಗೂ ಪಂಜರದಲ್ಲಿಡದೆ ಸ್ವತಂತ್ರವಾಗಿ ಮನೆಯೊಳಗೆ ಓಡಾಡಲು ಬಿಟ್ಟಿದ್ದರು. ಅದು ಮನೆಯವರ ಹೆಸರನ್ನೂ ಕೂಗುತ್ತಿತ್ತು. 6 ದಿನಗಳ ನಂತರ ಮರಳಿ ಬಂದ 'ಮಾವು'ಗೆ ಇಡೀ ಕುಟುಂಬವು ತುಪ್ಪದ ದೋಸೆ ಮತ್ತು ತಾಜಾ ಹಣ್ಣುಗಳನ್ನು ನೀಡಿ ಸಂಭ್ರಮದಿಂದ ಸ್ವಾಗತಿಸಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗಿಣಿಯನ್ನು ಕಳೆದುಕೊಂಡ ಬಗ್ಗೆ ಮಾತನಾಡಿದ ಸುನಿಲ್ ಕುಮಾರ್ ಸಿಂಗ್, 'ಮಾವು ನಮಗೆ ಕೇವಲ ಸಾಕುಪ್ರಾಣಿಯಾಗಿರಲಿಲ್ಲ, ಅದು ನಾಪತ್ತೆಯಾದಾಗಿನಿಂದ ಮನೆ ಸಂಪೂರ್ಣವಾಗಿ ಶೂನ್ಯವಾದಂತೆ ಭಾಸವಾಗುತ್ತಿತ್ತು. ಅದು ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ಹೇಳಲು ಕಲಿತಿದ್ದು, ಮನೆಗೆ ಬರುವವರನ್ನು ಆತ್ಮೀಯವಾಗಿ ಮಾತನಾಡಿಸುವ ಮೂಲಕ ಅವರನ್ನು ಪರಿಚಯಿಸುತ್ತಿತ್ತು,' ಎಂದು ಅವರು ಹೇಳಿಕೊಂಡಿದ್ದಾರೆ.

ಕಾಮೆಂಟ್ ಬಿಡಿ

Join Us