ದೇಶ

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ; ನಮ್ಮ ಹೋರಾಟದ ಕೇವಲ ಆರಂಭ ಅಷ್ಟೇ

ದೆಹಲಿ: ಸಾಮಾನ್ಯವಾಗಿ ಪ್ರತಿಭಟನೆ ನಡೆಸುವುದು ಇಷ್ಟವಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕಂಡು ಸುಮ್ಮನಿರಲು ಸಾಧ್ಯವಾಗದೆ ಇಲ್ಲಿಗೆ ಬಂದಿದ್ದೇನೆ. ನ್ಯಾಯಕ್ಕಾಗಿ ಹೋರಾಡಲೇಬೇಕಾಗುತ್ತದೆ. ಅಷ್ಟಕ್ಕೂ ಇದು ಹೋರಾಟದ ಆರಂಭವಷ್ಟೇ” ಎಂದು ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳ ಅಧ್ವಾನಕ್ಕೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಬೆಂಬಲ ನೀಡಿ ಸೋನಮ್ ವಾಂಗ್‌ಚುಕ್ ಭಾಗಿಯಾಗಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸೋನಮ್, “ದೇಶದ ಭವಿಷ್ಯ ಯುವ ಪೀಳಿಗೆಯ ಕೈಯಲ್ಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಸಮಗ್ರ ಸುಧಾರಣೆಗಳ ಅಗತ್ಯವಿದೆ” ಎಂದು ಕರೆ ನೀಡಿದರು.

“ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಕೇಳುತ್ತಿರುವುದು ನಮ್ಮ ಹೋರಾಟದ ಕೇವಲ ಆರಂಭ ಅಷ್ಟೇ. ಶಿಕ್ಷಣ ವ್ಯವಸ್ಥೆಯನ್ನು ಒಟ್ಟಾರೆಯಾಗಿ ತಳಮಟ್ಟದಿಂದ ಸುಧಾರಿಸುವುದು ಮತ್ತು ದೇಶದ ಕೋಟ್ಯಂತರ ಯುವಕರ ಭವಿಷ್ಯವನ್ನು ಕಾಪಾಡುವುದು ನಮ್ಮ ಪ್ರಮುಖ ಉದ್ದೇಶ” ಎಂದು ಪ್ರತಿಪಾದಿಸಿದ್ದಾರೆ.

“ದೇಶದ ಎಲ್ಲ ರಾಜಕಾರಣಿಗಳ ಮತ್ತು ಸರ್ಕಾರಿ ಉನ್ನತ ಅಧಿಕಾರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿಯೇ (ಸರ್ಕಾರಿ ಶಾಲೆ ಮತ್ತು ಕಾಲೇಜುಗಳು) ಕಲಿಯುವಂತಾಗಬೇಕು. ಆಡಳಿತ ನಡೆಸುವವರ ಮಕ್ಕಳು ಅಲ್ಲಿ ಓದಿದಾಗ ಮಾತ್ರ ಸಾಮಾನ್ಯ ನಾಗರಿಕರ ಮಕ್ಕಳು ಎದುರಿಸುತ್ತಿರುವ ನೈಜ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತವೆ ಮತ್ತು ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುತ್ತದೆ” ಎಂದು ಅಭಿಪ್ರಾಯಿಸಿದರು.

ಸಿಜೆಪಿ ಆರಂಭವಾದಾಗಿನಿಂದ ಸೋನಮ್ ವಾಂಗ್‌ಚುಕ್ ನಿರಂತರವಾಗಿ ಸಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಯುವಜನರ ವಿನೂತನ ಪ್ರತಿಭಟನಾ ಶೈಲಿಯನ್ನು ಶ್ಲಾಘಿಸಿದ್ದಾರೆ. ಹಾಗೆಯೇ ತಮ್ಮನ್ನು ತಾವು ‘ಗೌರವಾನ್ವಿತ ಜಿರಳೆ’ ಎಂದು ಕರೆದುಕೊಂಡಿದ್ದಾರೆ. ಇನ್ನು ಈಗಾಗಲೇ ಅಭಿಜೀತ್ ದೀಪ್ಕೆ ಮತ್ತು ಸಿಜೆಪಿ ಬೆಂಬಲಿಗರನ್ನು ಬಂಧಿಸಿದರೆ 42 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ಇನ್ನು ಸೋನಮ್ ವಾಂಗ್‌ಚುಕ್ ಮಾತ್ರವಲ್ಲದೆ ಹಲವು ಹೋರಾಟಗಾರರು, ರಾಜಕಾರಣಿಗಳು ಸಿಜೆಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಪ್ರಕಾಶ್ ರಾಜ್, ಆದಿತ್ಯ ಠಾಕ್ರೆ, ಉದ್ಧವ್ ಠಾಕ್ರೆ, ಸಂಜಯ್ ರಾವತ್ ಮೊದಲಾದವರು ಬೆಂಬಲ ನೀಡಿದ್ದಾರೆ.

ಕಾಮೆಂಟ್ ಬಿಡಿ

Join Us